ADVERTISEMENT

‘ಜೆಡಿಎಸ್‌ ಪಕ್ಷದಲ್ಲಿ ಹಣ ಕೊಟ್ಟರೆ ಟಿಕೆಟ್‌’

ಯುವ ಕಾಂಗ್ರೆಸ್‌ ಸಮಾವೇಶದಲ್ಲಿ ಮಧು ಮಾದೇಗೌಡ ನೇರ ಆರೋಪ, ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 12:17 IST
Last Updated 11 ಏಪ್ರಿಲ್ 2018, 12:17 IST

ಮದ್ದೂರು: ‘ಜೆಡಿಎಸ್‌ ಪಕ್ಷಕ್ಕೆ ಯಾವುದೇ ಸಿದ್ಧಾಂತಗಳಿಲ್ಲ. ಈ ಪಕ್ಷದಲ್ಲಿ ಹಣವನ್ನು ಕೊಟ್ಟರೆ ಯಾರಿಗೆ ಬೇಕಾದರೂ ಚುನಾವಣೆಗೆ ಟಿಕೆಟ್‌ ದೊರಕಲಿದೆ’ ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಮಧು ಜಿ.ಮಾದೇಗೌಡ ವಾಗ್ದಾಳಿ ನಡೆಸಿದರು.

ಪಟ್ಟಣದ ಜಾಮೀಯ ಷಾದಿ ಮಹಲ್‌ನಲ್ಲಿ ಮಂಗಳವಾರ ನಡೆದ ‘ಯುವಕರ ನಡಿಗೆ ಕಾಂಗ್ರೆಸ್ ನಡಿಗೆ’ ಯುವ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಜೆಡಿಎಸ್‌ನಲ್ಲಿ ಸೂಟ್‌ಕೇಸ್ ರಾಜಕಾರಣವಿದೆ ಎಂದು ರೇವಣ್ಣ ಪುತ್ರ ಪ್ರಜ್ವಲ್‌ ಅವರೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇಂತಹ ಅನೈತಿಕ ರಾಜಕೀಯ ಸಿದ್ಧಾಂತದ ಪಕ್ಷವನ್ನು ಜನರು ನಂಬಬಾರದು’ ಎಂದು ಕೋರಿದರು.

ADVERTISEMENT

’ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಏನೇನು ಮಾಡಿದ್ದಾರೆ ಎಂಬುದರ ವಿವರಗಳನ್ನು ಬರುವ ದಿನಗಳಲ್ಲಿ ಬಿಚ್ಚಿಡುತ್ತೇವೆ. ಜನತೆ ಈ ಎಲ್ಲವನ್ನು ಗಮನಿಸಿ ತೀರ್ಮಾನ ಮಾಡಬೇಕು’ ಎಂದು ಮನವಿ ಮಾಡಿದರು.

ಸೆನೆಟ್ ಮಾಜಿ ಸದಸ್ಯ ವಿ.ಕೆ.ಜಗದೀಶ್ ಮಾತನಾಡಿ, ‘ಮದ್ದೂರು ಕ್ಷೇತ್ರದಲ್ಲಿ ತಮ್ಮಣ್ಣ ಬಂದ ಮೇಲೆ ದ್ವೇಷದ ರಾಜಕಾರಣ ಇದೆ. ಹಿಂದೆ ಎಸ್.ಎಂ.ಕೃಷ್ಣ, ಎಂ.ಎಸ್.ಸಿದ್ದರಾಜು ವಿರುದ್ಧ ನಾವು ಸಿಡಿದೆದ್ದಿದ್ದವು. ಅವರು ದ್ವೇಷದ ರಾಜಕಾರಣ ಮಾಡಲಿಲ್ಲ. ದ್ವೇಷದ ರಾಜಕಾರಣಕ್ಕೆ ಪಾಠಕಲಿಸುವ ಕಾಲ ಬಂದಿದೆ’ ಎಂದರು.

ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರು, ‘ಕ್ಷೇತ್ರದಲ್ಲಿ 15ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಕ್ಕಿಲ್ಲ. ಮತದಾರರು ಈ ಬಾರಿಕಾಂಗ್ರೆಸ್‌ಗೆ ಆಶೀರ್ವಾದ ಮಾಡಬೇಕು’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ರಾಮಕೃಷ್ಣ ಅವರು, ‘ಜೆಡಿಎಸ್ ಪಕ್ಷವನ್ನು ಬೇರೊಬ್ಬರು ಅತಿಕ್ರಮಿಸಿದ್ದಾರೆ. ಅಲ್ಲಿ ನಿಷ್ಟಾವಂತರಿಗೆ ಜಾಗವಿಲ್ಲ. ಸ್ವಾಭಿಮಾನವಿರುವ ನಿಷ್ಟಾವಂತ ಇನ್ನಾದರೂ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಲಿ’ ಎಂದರು.

ತಾಪಂ ಸದಸ್ಯ ಚಲುವರಾಜು, ಜಿಪಂ ಮಾಜಿ ಅಧ್ಯಕ್ಷ ಸುರೇಶ್‌ ಕಂಠಿ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಸಿ.ಬಸವರಾಜು, ಮಾಜಿ ಉಪಾಧ್ಯಕ್ಷ ಇಂತಿಯಾಜ್‌ ವುಲ್ಲಾಖಾನ್, ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಗೇಶ್, ಪುರಸಭೆ ಸದಸ್ಯ ಮನ್ಸೂರ್‌ಖಾನ್ ಮಾತನಾಡಿದರು.

ಜಿಪಂ ಸದಸ್ಯ ರಾಜೀವ್, ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್‌ ಕುಮಾರ್, ಮುಖಂಡರಾದ ನಾಗಭೂಷಣ್, ಮಾಚಹಳ್ಳಿ ಕುಮಾರ್‌, ಮುನಾವರ್‌ ಪಾಷ, ಶಶಿಧರ್, ಸಿದ್ದು, ಗೌತಮ್ಮ, ಅಮರಬಾಬು, ಮರಿದೇವರು, ಕುಮಾರ್, ರವಿ, ನಾಗೇಂದ್ರ, ರಾಜು ಸೇರಿದಂತೆ ಹಲವರು ಇದ್ದರು.

ಸೇರ್ಪಡೆ: ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಲತಾ ಅವರ ಪುತ್ರ ಯಶವಂತಗೌಡ, ದಲಿತ ಮುಖಂಡ ಎನ್.ಆರ್.ಆತ್ಮಾನಂದ ಇತರರು ಕಾಂಗ್ರೆಸ್ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.