ADVERTISEMENT

ಜ್ಞಾನ ಪರಿಷ್ಕರಿಸಿಕೊಳ್ಳಿ: ಡಿಸಿ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 4:05 IST
Last Updated 9 ಅಕ್ಟೋಬರ್ 2011, 4:05 IST

ಮಂಡ್ಯ: ವೈದ್ಯ ವೃತ್ತಿಯನ್ನು ಕೈಗೊಳ್ಳುವ ಉದ್ದೇಶದೊಂದಿಗೆ ವೈದ್ಯಕೀಯ ಶಿಕ್ಷಣ ಕೋರ್ಸ್‌ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಆಯಾ ಕ್ಷೇತ್ರಗಳ ವೈದ್ಯಕೀಯ ಚಿಕಿತ್ಸೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗೆಗೆ ಜ್ಞಾನವನ್ನು ಪರಿಷ್ಕರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಸಲಹೆ ಮಾಡಿದರು.

ಶನಿವಾರ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮಿಮ್ಸ) ಆರಂಭವಾದ ಚರ್ಮರೋಗ               ಚಿಕಿತ್ಸಾ ತಜ್ಞರ ಎರಡು ದಿನಗಳ ಸಮ್ಮೇಳನ `ಕ್ಯುಟಿಕಾನ್ ಕರ್ನಾಟಕ 2011~ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜನರ ಜೀವದೊಂದಿಗೆ ನೇರವಾಗಿ ವ್ಯವಹರಿಸುವ ವೈದ್ಯರು ತಮ್ಮ ಕ್ಷೇತ್ರ, ಚಿಕಿತ್ಸಾ ಕ್ರಮದಲ್ಲಿ ಆಗುತ್ತಿರುವ ಬದಲಾವಣೆಗಳ ಬಗೆಗೆ ಮಾಹಿತಿ ಪಡೆಯುವುದು ಅಗತ್ಯ. ಹಿರಿಯ ವೈದ್ಯರು, ತಜ್ಞರೂ ಕೂಡಾ ಈ ನಿಟ್ಟಿನಲ್ಲಿ ಕಿರಿಯರಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ಮಾಡಿದರು.

ವೈದ್ಯಕೀಯ ಕ್ಷೇತ್ರ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವ ಕ್ಷೇತ್ರ. ಚಿಕಿತ್ಸೆ ಕ್ರಮ, ತಂತ್ರಜ್ಞಾನದಲ್ಲಿ ಪ್ರತಿ ದಿನವೂ ಬದಲಾವಣೆ ಆಗುತ್ತಿರುತ್ತದೆ. ಇದರ ಮಾಹಿತಿ ಪಡೆಯುವುದು ವೈದ್ಯರ ದಕ್ಷತೆಯನ್ನೂ ಹೆಚ್ಚಿಸಲಿದೆ  ಎಂದರು.

ಇನ್ನೊಂದೆಡೆ, ವೈದ್ಯರು ಆಗಾಗ್ಗೆ ಪರಸ್ಪರ ಒಂದುಗೂಡಿ ವಿಷಯದ ಚರ್ಚೆ ಮಾಡುವುದು ಅಗತ್ಯ. ಇದು, ಪರಸ್ಪರ ವಿಚಾರ ವಿನಿಮಯ, ತಂತ್ರಜ್ಞಾನ, ಅದರ ಅನುಕೂಲ, ಬಳಕೆ ಕುರಿತು ಮಾಹಿತಿ ಪಡೆಯಲು ಅನುವಾಗಲಿದೆ ಎಂದರು.

ಮಂಡ್ಯ ವೈದ್ಯಕೀಯ ಕಾಲೇಜು ಕುರಿತು  ಮಾತನಾಡಿದ ಅವರು,  ಈ ಕಾಲೇಜು ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದು,   ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಈ ವಿಚಾರ ಸಂಕಿರಣಕ್ಕೂ  ಸಭಾಂಗಣವನ್ನು ತರಾತುರಿ          ಯಲ್ಲಿಯೇ ಸಜ್ಜುಗೊಳಿಸಲಾಗಿದೆ. ವರ್ಷದಲ್ಲಿ ಈ ಎಲ್ಲವೂ ಸರಿಹೋಗಬಹುದು ಎಂದು ಭರವಸೆ ನೀಡಿದರು.

ಮುಖ್ಯ ಭಾಷಣ ಮಾಡಿದ ಐಎಡಿವಿಎಲ್ ರಾಷ್ಟ್ರೀಯ ಅಧ್ಯಕ್ಷ ಡಾ. ಎಸ್.ಡಿ.ಎನ್.ಗುಪ್ತಾ ಅವರು, ಚರ್ಮರೋಗ ಕ್ಷೇತ್ರದಲ್ಲಿ ತೊಡಗಿರುವ ವೈದ್ಯರಿಗೆ ಉತ್ತೇಜನ ನೀಡಲು ಐಎಡಿವಿಎಲ್ ಒಟ್ಟು 60 ವಿದ್ಯಾರ್ಥಿ ವೇತನವನ್ನು ಸ್ಥಾಪಿಸಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಭಾನುವಾರವು ನಡೆಯುವ ಈ ಸಮ್ಮೇಳನವು ಚರ್ಮ, ಲೈಂಗಿಕ ಮತ್ತು ಕುಷ್ಠರೋಗ ಚಿಕಿತ್ಸೆಯಲ್ಲಿ ಈಚಿನ ದಿನಗಳಲ್ಲಿ ಆಗಿರುವ ಬೆಳವಣಿಗೆ, ಸವಾಲು ಕುರಿತು ಚರ್ಚೆ, ಸಂವಾದ ನಡೆಸಲಿದೆ.

ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳುನಡೆಯಲಿದ್ದು, ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ತಜ್ಞರಿಂದ 150ಕ್ಕೂ ಹೆಚ್ಚು ಪ್ರಬಂಧಗಳು ಮಂಡನೆಯಾಗಲಿವೆ. ಇದು, ರಾಜ್ಯದಲ್ಲಿ ನಡೆಯುತ್ತಿರುವ ಎರಡನೇ ಸಮ್ಮೆಳನವಾಗಿದೆ.
`ಕ್ಯುಟಿಕಾನ್ ಕರ್ನಾಟಕ 2011~ ಉದ್ಘಾಟನಾ ಸಮಾರಂಭದಲ್ಲಿ  ಮಿಮ್ಸನ ಡಾ. ಶಿವಕುಮಾರ್, ಮಂಡ್ಯ ಚರ್ಮರೋಗ ತಜ್ಞರ  ಸಂಘದ ಅಧ್ಯಕ್ಷ ಡಾ. ಬಿ.ಡಿ. ಸತ್ಯ ನಾರಾಯಣ, ಮಿಮ್ಸ ನಿರ್ದೇಶಕ    ಡಾ. ಜಿ.ಗುರುಶಂಕರ್,   ಡಾ. ರಮೇಶ್‌ಭಟ್, ಡಾ. ಶಶಿಕುಮಾರ್, ಮಿಮ್ಸ ಚರ್ಮರೋಗ ವಿಭಾಗದ ಅಧ್ಯಕ್ಷ ಮುಖ್ಯಸ್ಥ ಡಾ. ಹರೀಶ್, ಮಿಮ್ಸನ ವೈದ್ಯಕೀಯ ಅಧೀಕ್ಷಕ ಡಾ. ರಾಮಲಿಂಗೇಗೌಡ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.