ADVERTISEMENT

ಡಿಸಿ ಪ್ರಾಂಗಣದಲ್ಲಿ ಕಚೇರಿ– ರಮ್ಯಾ ಹಿಂದೇಟು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 10:26 IST
Last Updated 11 ಸೆಪ್ಟೆಂಬರ್ 2013, 10:26 IST

ಮಂಡ್ಯ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಸದರ ಕಚೇರಿ ಇರುವುದು ಸಾಮಾನ್ಯ. ಆದರೆ, ಮಂಡ್ಯ ಸಂಸದೆ ರಮ್ಯಾ ಅವರು ಸಾಕು ತಂದೆ ಸಾವಿನ ನೆನಪಿನಿಂದ ಹೊರಬರಲು ಅಲ್ಲಿ ಕಚೇರಿ ಆರಂಭಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ದಿನ ರಮ್ಯಾ ಅವರ ಸಾಕು ತಂದೆಯ ನಾರಾಯಣ್‌ ಅವರು ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ತೀರಿಕೊಂಡಿದ್ದರು. ಅಲ್ಲಿಯೇ ಕಚೇರಿ ಮಾಡಿದರೆ, ಅವರ ನೆನಪು ಕಾಡುತ್ತದೆ ಎನ್ನುವ ಭಾವನೆ ಅವರದ್ದಾಗಿದೆ.

ಮಂಗಳವಾರ ನಗರಕ್ಕೆ ಭೇಟಿ ನೀಡಿದಾಗ ಈ ಕುರಿತು ಅಧಿಕಾರಿಗಳೊಂದಿಗೂ ಹಂಚಿಕೊಂಡಿದ್ದು, ಜಿಲ್ಲಾ ಪಂಚಾಯಿತಿ ಅಥವಾ ಮಂಡ್ಯ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಅವಕಾಶ ಮಾಡಿಕೊಟ್ಟರೆ ಉತ್ತಮ ಎಂದು ತಮ್ಮ ಅಭಿಪ್ರಾಯವನ್ನೂ ತಿಳಿಸಿದ್ದಾರೆ.
ವಾಸ್ತು ದೋಷ: ಮಂಡ್ಯದಲ್ಲಿ ಮನೆ ಯಾವಾಗ ಮಾಡುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೆಲವು ಮನೆಗಳನ್ನು ನೋಡಿದ್ದೇವೆ. ಚೆನ್ನಾಗಿಲ್ಲ. ಇನು್ನ ಕೆಲವು ಮನೆಗಳ ವಾಸ್ತು ಸರಿಯಾಗಿಲ್ಲ. ಆದಷು್ಟ ಶೀಘ್ರದಲ್ಲಿಯೇ ಮನೆ ಮಾಡುತ್ತೇನೆ’ ಎಂದು ಹೇಳಿದರು.

‘ಮಾದರಿ ಕ್ಷೇತ್ರ ನನ್ನ ಕನಸು’
ಮಂಡ್ಯ ಲೋಕಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದು ನನ್ನ ಕನಸು ಎಂದು ಸಂಸತ್ ಸದಸ್ಯೆ ರಮ್ಯಾ ತಿಳಿಸಿದರು.
ನಿಮ್ಮ ಕನಸಿನ ಮಾದರಿ ಕ್ಷೇತ್ರ ಹೇಗಿರುತ್ತದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಡೀ ರಾಜ್ಯದಲ್ಲೇ ಮಂಡ್ಯ ಲೋಕಸಭಾ ಕ್ಷೇತ್ರ ಮಾದರಿ ಆಗಿರುತ್ತದೆ ಎಂದರು.

‘ಇಡೀ ಕ್ಷೇತ್ರ ಸ್ವಚ್ಛವಾಗಿರಬೇಕು. ಸಾಕ್ಷರತೆ ಪ್ರಮಾಣ ಇನ್ನಷ್ಟು ಹೆಚ್ಚಬೇಕು. ಎಲ್ಲರಿಗೂ ಉದ್ಯೋಗ ಸಿಗಬೇಕು. ಖುಷಿಯಿಂದ ಎಲ್ಲರೂ ಬದುಕು ನಡೆಸುವಂತಾಗಬೇಕು  ಎನ್ನುವುದು ನನ್ನ ಮಾದರಿ ಕ್ಷೇತ್ರದ ಕನಸು’ ಎಂದರು.

‘ಶಿಕ್ಷಣ, ಆರೋಗ್ಯ, ವ್ಯವಸಾಯ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡುತ್ತೇನೆ. ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುವ ಮೂಲಕ ಜನರ ಹಿತ ಕಾಯುತ್ತೇನೆ. ಕಾಳಜಿಯಿಂದ ನನ್ನ ಜವಾಬ್ದಾರಿ ನಿಭಾಯಿಸುತ್ತೇನೆ’ ಎಂದು ಹೇಳಿದರು.

‘ಈ ಗುರಿ ತಲುಪಲು ಕಾಲಾವಕಾಶ ಕಡಿಮೆಯಿದ್ದರೂ ಅಧಿಕಾರಿಗಳ ವೃತ್ತಿ ಅನುಭವ ಮತ್ತು ಇಚ್ಛಾಶಕ್ತಿಯಿಂದ ಸಾಕಷ್ಟು ಕೆಲಸ ಮಾಡುವ ವಿಶ್ವಾಸವಿದೆ. ಇದು, ನನ್ನೊಬ್ಬ ಳಿಂದ ಸಾಧ್ಯವಿಲ್ಲ. ಎಲ್ಲರ ಸಹಕಾರವೂ ಬೇಕಿದೆ’ ಎಂದರು.

ಹೊಸ ಅನುಭವ 
‘ಸಂಸತ್ತಿನ ಕಲಾಪದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು, ಹೊಸ ಅನುಭವವನ್ನು ನೀಡಿದೆ’ ಎಂದು ರಮ್ಯಾ ಹೇಳಿದರು.
ನಾನು ಕಲಿಯಬೇಕಾದುದು ಬಹಳಷ್ಟು ಇದೆ. ಹಂತ ಹಂತವಾಗಿ ಎಲ್ಲವನ್ನೂ ಕಲಿಯುತ್ತೇನೆ ಎನ್ನುವ ವಿಶ್ವಾಸವೂ ಇದೆ. ಕಲಾಪದಲ್ಲಿ ಪ್ರಶ್ನೆಗಳನ್ನು ಕೇಳಬೇಕೆಂಬ ಇಚೆ್ಛಯಿದ್ದರೂ ಸಾಧ್ಯವಾಗಲಿಲ್ಲ ಎಂದರು.

ರಾಜ್ಯದ ಎಲ್ಲಾ ಸಂಸದರು ಕಲಾಪದಲ್ಲಿ ಪಾಲ್ಗೊಂಡಿದ್ದ ನನ್ನನ್ನು ಆತ್ಮೀಯತೆಯಿಂದ ಮಾತನಾಡಿಸಿದರು. ಒಟ್ಟು ನಾಲ್ಕು ಮಸೂದೆಗಳಿಗೆ ಮತ ಹಾಕಿದೆ. ಇದೊಂದು ಒಳ್ಳೆಯ ಅವಕಾಶ. ಹೊಸ ಅನುಭವ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.