ADVERTISEMENT

ತಿಂಗಳಲ್ಲೇ ಗುಂಡಿ ಬಿದ್ದ ಡಾಂಬರ್‌ ರಸ್ತೆ: ಜನರ ಆಕ್ರೋಶ

ನಾಗಮಂಗಲ–ಮಾರ್ಕೋನಹಳ್ಳಿ ಮಾರ್ಗದಲ್ಲಿ ಕೆಂದನಹಳ್ಳಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2018, 10:12 IST
Last Updated 17 ಜೂನ್ 2018, 10:12 IST
ನಾಗಮಂಗಲ–ಮಾರ್ಕೋನಹಳ್ಳಿ ರಸ್ತೆಯಲ್ಲಿ ಕೆಂದನಹಳ್ಳಿಯ ಬಳಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ರಸ್ತೆಯಲ್ಲಿ ಗುಂಡಿ ಉಂಟಾಗಿರುವುದು
ನಾಗಮಂಗಲ–ಮಾರ್ಕೋನಹಳ್ಳಿ ರಸ್ತೆಯಲ್ಲಿ ಕೆಂದನಹಳ್ಳಿಯ ಬಳಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ರಸ್ತೆಯಲ್ಲಿ ಗುಂಡಿ ಉಂಟಾಗಿರುವುದು   

ನಾಗಮಂಗಲ: ಅಭಿವೃದ್ಧಿ ಹೊಂದಿದ ಕೆಲವೇ ತಿಂಗಳಿನಲ್ಲಿ ಡಾಂಬರ್‌ ರಸ್ತೆಯೊಂದು ಸಂಪೂರ್ಣವಾಗಿ ಗುಂಡಿ ಬಿದ್ದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ನಾಗಮಂಗಲ–ಮಾರ್ಕೋನಹಳ್ಳಿ ರಸ್ತೆಯಲ್ಲಿ ಕೆಂದನಹಳ್ಳಿ ಬಳಿ ಶಾಸ‌ಕ ಎನ್.ಚಲುವರಾಯಸ್ವಾಮಿ ತಮ್ಮ ಅಧಿಕಾರದ ಕೊನೆಯ ಅವಧಿಯಲ್ಲಿ ಭೂಮಿಪೂಜೆ ನೆರವೇರಿಸಿ ಅಭಿವೃದ್ಧಿ ಪಡಿಸಿದ ರಸ್ತೆಯೊಂದು ಕೇವಲ ಎರಡು ತಿಂಗಳಿನಲ್ಲೇ ಗುಂಡಿ ಬಿದ್ದು ಹಾಳಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

‘900 ಮೀ ಉದ್ದದ ರಸ್ತೆಯನ್ನು ಸುಮಾರು ₹ 85 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಬಹಳ ದಿನಗಳ ಕಾಲ ಗುತ್ತಿಗೆದಾರರು ಜಲ್ಲಿಯನ್ನು ಹರಡಿದ್ದರಿಂದ ವಾಹನ ಸವಾರರಿಗೆ ಓಡಾಡಲು ತೀವ್ರತರ ತೊಂದರೆಯಾಗಿತ್ತು. ಕೆಲವು ದಿನಗಳ ಹಿಂದೆ ಡಾಂಬರ್‌ ಹಾಕಲಾಗಿದೆ. ಈಗ ರಸ್ತೆಯ ಎರಡೂ ಕಡೆಗಳಲ್ಲಿ ಗುಂಡಿ ಬಿದ್ದಿದೆ. ಕಳಪೆ ಮಣ್ಣನ್ನು ರಸ್ತೆಗೆ ಹಾಕಿರುವುದೇ ಇದಕ್ಕೆ ಕಾರಣ’ ಎಂದು ಜನರು ದೂರಿದ್ದಾರೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಾಥ್, ಗುತ್ತಿಗೆದಾರರಿಗೆ ನಾವಿನ್ನು ಬಿಲ್ ನೀಡಿಲ್ಲ. ಅವರಿಗೆ ಈಗಾಗಲೇ ನೋಟಿಸ್ ನೀಡಿದ್ದೇವೆ. ಒಂದೆರಡು ದಿನಗಳಲ್ಲಿ ಕಾಮಗಾರಿಯನ್ನು ಮತ್ತೆ ಕೈಗೆತ್ತಿಕೊಂಡು ಸರಿಪಡಿಸಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ನಿರ್ಮಿಸಿದ ರಸ್ತೆಯೊಂದು ಇಷ್ಟು ಬೇಗ ಹಾಳಾಗಿರುವುದು, ಸರ್ಕಾರದ ಹಣ ಪೋಲಾಗುತ್ತಿರುವುದಕ್ಕೆ ನಿದರ್ಶನವಾಗಿದೆ ಎನ್ನುತ್ತಾರೆ ಕೆಂದನಹಳ್ಳಿಯ ರೈತ ಗೋವಿಂದಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.