ADVERTISEMENT

ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:20 IST
Last Updated 14 ಸೆಪ್ಟೆಂಬರ್ 2011, 9:20 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಕಸಬಾ ಹೋಬಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಬೆಳೆದಿರುವ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ವ್ಯಾಪಕವಾಗಿ ಹರಡಿದೆ.

  ನಗುವನಹಳ್ಳಿ, ಬೊಮ್ಮೂರು ಅಗ್ರಹಾರ, ಚಂದಗಾಲು, ಹೊಸೂರು, ಮೇಳಾಪುರಗಳಲ್ಲಿ ಈ ಬಾಧೆ ಹೆಚ್ಚಾಗಿ ಕಂಡು ಬಂದಿದೆ. ರೋಗಕ್ಕೆ ತುತ್ತಾಗಿ ರುವ ತೆಂಗಿನ ಮರಗಳ ಗರಿಗಳು ಒಣಗಿದಂತೆ ಕಂಡು ಬರುತ್ತಿವೆ. ಮುಷ್ಟಿ ಗಾತ್ರದ ಕುರುವೆ ಗಳು ಉದುರುತ್ತಿವೆ. ಅಂತಹ ಮರಗಳಲ್ಲಿ ಕಾಯಿ ಕಟ್ಚದೆ ಫಲ ಕಡಿಮೆಯಾಗುತ್ತಿದೆ. 25ರಿಂದ 30 ಅಡಿ ಎತ್ತರ ಬೆಳದಿರುವ ಮರಗಳನ್ನು ಈ ರೋಗ ಹೆಚ್ಚು ಆವರಿಸಿದೆ.
 
ಇಂತಹ ಮರಗಳಲ್ಲಿ ಬೆರಳೆಣಿಕೆಯಷ್ಟು ಕಾಯಿ ಕೀಳುವುದೂ ಕಷ್ಟವಾಗಿದೆ. 50 ಮರ ಇರುವ ರೈತರು ನೂರಿನ್ನೂರು ತೆಂಗಿನ ಕಾಯಿ ಮಾತ್ರ ಪಡೆಯುತ್ತಿದ್ದಾರೆ. ಅವು ಕೂಡ ಸಣ್ಣ ಗಾತ್ರದ್ದಾಗಿರುತ್ತವೆ ಎಂದು ರೈತರು ಸಮಸ್ಯೆ ತೋಡಿಕೊಳ್ಳುತ್ತಾರೆ. ರೈತರ ದೂರು ಹೆಚ್ಚಾದ ಹಿನ್ನೆಲೆಯಲ್ಲಿ ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್ ರೋಗ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಈಚೆಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

  `ಕಳೆದ ಐದಾರು ವರ್ಷಗಳಿಂದ ಈ ಭಾಗದಲ್ಲಿ ತೆಂಗಿನ ಮರಗಳಿಗೆ ಕಪ್ಪುತಲೆ ಹುಳು ಬಾಧೆ ಇದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಒಂದೆರಡು ಬಾರಿ ರೋಗ ನಿಯಂತ್ರಣಕ್ಕೆ ಔಷಧ ನೀಡಿದ್ದು ಸಲಹೆಯನ್ನೂ ನೀಡಿದ್ದಾರೆ. ಅದರೂ ರೋಗ ನಿಯಂತ್ರಣಕ್ಕೆ ಬಂದಿಲ್ಲ~ ಎಂದು ರೈತರಾದ ನಗುವನಹಳ್ಳಿ ಶಿವಸ್ವಾಮಿ, ಕೃಷ್ಣಪ್ಪ ಇತರರು ಅಳಲು ತೋಡಿಕೊಂಡಿದ್ದಾರೆ.

`ಕಪ್ಪುತಲೆ ಹುಳು ಬಾಧೆ ನಿಯಂತ್ರಣಕ್ಕೆ ಸಾಮೂಹಿಕ ನಿಯಂತ್ರಣ ಕ್ರಮ ಅನುಸರಿಸಬೇಕು. ಒಂದಿಬ್ಬರು ಕೀಟನಾಶಕ ಬಳಸಿದೇ ಇದ್ದರೆ ಈ ಬಾಧೆ ಮತ್ತೆ ಕಾಣಿಸಿಕೊಳ್ಳುತ್ತದೆ. ಬೇವಿನ ಹಿಂಡಿಯನ್ನು ತೆಂಗಿನ ಮರಗಳ ಬುಡಕ್ಕೆ ಸೂಚಿತ ಪ್ರಮಾಣದಲ್ಲಿ ಹಾಕಬೇಕು~ ಎಂದು ಅಧಿಕಾರಿಗಳು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.