ADVERTISEMENT

ದೇಶಿ ರಾಸುಗಳ ಪೋಷಕ!

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2012, 6:20 IST
Last Updated 26 ಫೆಬ್ರುವರಿ 2012, 6:20 IST
ದೇಶಿ ರಾಸುಗಳ ಪೋಷಕ!
ದೇಶಿ ರಾಸುಗಳ ಪೋಷಕ!   

ಪಾಂಡವಪುರ: ತಾಲ್ಲೂಕಿನ ರೈತ ನೊಬ್ಬ ಲಾಭದ ನಿರೀಕ್ಷೆಯಿಲ್ಲದೇ ಲಕ್ಷಾಂತರ ಬಂಡವಾಳ ಹಾಕಿ ಎತ್ತು ಗಳನ್ನು ಸಾಕುವುದರಲ್ಲಿ ತೃಪ್ತಿಪಡು ತ್ತಿದ್ದಾರೆ. ಇವರು, ಶ್ಯಾದನಹಳ್ಳಿ ಗ್ರಾಮದ ಚಲುವರಾಜು. ವಿವಿಧೆಡೆ ನಡೆಯುವ ಜೋಡಿಗಟ್ಟ, ಘಾಟಿ ಸುಬ್ರಹ್ಮಣ್ಯ, ಚುಂಚನಕಟ್ಟೆ, ಮುಡುಕ ತೊರೆ, ನಂದಿಬಸವೇಶ್ವರ, ಅಯ್ಯನ ಗುಡಿ, ಮುತ್ತುರಾಯ, ಸಿದ್ದಗಂಗಾ, ಸಿ.ಹಳ್ಳಿ, ಹೇಮಗಿರಿ, ಬೇಬಿಬೆಟ್ಟದಲ್ಲಿನ ದನಗಳ ಜಾತ್ರೆಗಳಿಗೆ ಹೋಗಿ ಎತ್ತು ಖರೀದಿಸುವುದು, ಸಾಕುವುದನ್ನು ರೂಢಿಮಾಡಿಕೊಂಡಿದ್ದಾರೆ.

ಈಚೆಗೆ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ದನಗಳ ಜಾತ್ರೆಯಲ್ಲಿ  ಮೂರು ಜೊತೆ ಎತ್ತುಗಳನ್ನು ಪ್ರದರ್ಶನ, ಮಾರಾಟಕ್ಕಿಟ್ಟಿರುವ ಚಲುವರಾಜು ದೇಸಿ ತಳಿಯ 4 ಹಲ್ಲುಗಳ ಅಂದಾಜು ರೂ. 1.6 ಲಕ್ಷ  ಮೌಲ್ಯದ ಒಂದು ಜತೆ, ಹಾಲುಹಲ್ಲಿನ ಸುಮಾರು ರೂ. 1.35 ಲಕ್ಷ ಮೌಲ್ಯದ, 6 ಹಲ್ಲಿನ ರೂ. 1 ಲಕ್ಷ ಮೌಲ್ಯದ ಎತ್ತುಗಳನ್ನು ಸಾಕಿದ್ದಾರೆ.

ಸಾಕಿದ ಎತ್ತುಗಳಿಗೆ ಬೆಳಿಗ್ಗೆ ರವೆಗಂಜಿ ಕುಡಿಸಿ ಬಿಸಿನೀರು ಸ್ನಾನ, ಮಧ್ಯಾಹ್ನ ಹೆಸರುಕಾಳು, ಉದ್ದಿನಕಾಳು, ಮೆಂತ್ಯ ಪುಡಿಮಾಡಿ ಮುದ್ದೆ ತಯಾರಿಸಿ ತಿನ್ನಿಸುತ್ತಾರೆ. ಸಂಜೆ ಹುರುಳಿನುಚ್ಚು, ರವೆಬೂಸ, ಅಕ್ಕಿನುಚ್ಚು ಮಿಶ್ರಣ ತಿನ್ನಿಸುತ್ತಾರೆ. ಅವರ ಪ್ರಕಾರ, ನಿತ್ಯ ಒಂದು ಜೋಡಿ ಎತ್ತಿಗೆ ವೆಚ್ಚ ಸುಮಾರು ರೂ. 500.
ಇವರ ತಂದೆಯೂ ಕೂಡಾ ಎತ್ತು ಸಾಕುವ ಅಭಿರುಚಿ ಬೆಳೆಸಿಕೊಂಡಿದ್ದರು. ಅಂದಿನ ಮುಖ್ಯಮಂತ್ರಿ ಡಿ.ದೇವರಾಜು ಅರಸುರವರಿಂದ ಉತ್ತಮ ರಾಸುಗಳ ಬಹುಮಾನ ಪಡೆದವರು. ತಂದೆಯ ನಂತರ ಮಗ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

`ಎತ್ತುಗಳನ್ನು ಸಾಕುವುದು ಒಂದು ರೀತಿ ಪ್ರೀತಿ. ದೇಸಿಯ ತಳಿಗಳು ನಾಶವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಈ ಮೂಲಕ ಅವುಗಳ ತಳಿ ಉಳಿಸುವ ಯತ್ನವು ಇದೆ ಎನ್ನುತ್ತಾರೆ ಚಲುವರಾಜ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.