ADVERTISEMENT

ನಗರಸಭೆ ಆಡಳಿತಕ್ಕೆ ಸಚಿವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2012, 9:05 IST
Last Updated 18 ನವೆಂಬರ್ 2012, 9:05 IST

ಮಂಡ್ಯ: ನಗರದಲ್ಲಿ ಅವ್ಯವಸ್ಥೆಯಿದೆ. ಸ್ವಚ್ಛತೆ, ಮೂಲ ಸೌಕರ್ಯವನ್ನು ಸಮರ್ಪಕವಾಗಿ ಒದಗಿಸಿಲ್ಲ. ನಗರಸಭೆ ಆಯುಕ್ತರಿಗೆ, ಸರಿ ಪಡಿಸುವಂತೆ ಎಚ್ಚರಿಕೆ ನೀಡಿದ್ದೇವೆ. ಸರಿ ಮಾಡದಿದ್ದರೆ ಕ್ರಮಕೈಗೊಳ್ಳಲಾಗು ವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ಶನಿವಾರ ನಗರದ ವಿವಿಧ ಪ್ರದೇಶಗಳಿಗೆ ಬೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರಸಭೆ ಆಡಳಿತ ವ್ಯವಸ್ಥೆ ಕುಸಿದಿದೆ.  ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಕೂಡಲೇ ಎಲ್ಲವನ್ನೂ ಸರಿಪಡಿಸಲು ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದೇನೆ ಎಂದರು.

ತರಕಾರಿ ಮಾರುಕಟ್ಟೆ ಅವ್ಯವಸ್ಥೆಯಿಂದ ಕೂಡಿದೆ. ಅದನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಉತ್ತಮ ಮಾರುಕಟ್ಟೆಯೊಂದನ್ನು ನಿರ್ಮಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಈಗಿರುವ ಜಾಗದಲ್ಲಿಯೇ ನಿರ್ಮಿಸಬೇಕೇ? ಹೊಸ ಜಾಗ ಬೇಕೇ ಎಂಬುದನ್ನು ಪರಿಶೀಲಿಸಿ, ಶೀಘ್ರದಲ್ಲಿಯೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ಸಂಜಯ ವೃತ್ತದಿಂದ ಹೊಳಲು ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಕೆಳ ಸೇತುವೆ ರಸ್ತೆ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುವುದು. ಹೊಸಹಳ್ಳಿ ಯಲ್ಲಿ ಶಾಲೆಯೊಂದಕ್ಕೆ ಬಾಗಿಲು, ಕಿಟಕಿಗಳಿಲ್ಲ. ಆ ಬಗ್ಗೆ ಗಮನ ಹರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾ ಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದರು.

ಕಳೆದ ಬಾರಿ ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದ್ದ 30 ಕೋಟಿ ರೂಪಾಯಿಯಲ್ಲಿ 27 ಕೋಟಿ ರೂಪಾಯಿ ಖರ್ಚಾಗಿದೆ. ಆ ಕಾಮಗಾರಿಗಳ ವೀಕ್ಷಣೆಗೆ ಮತ್ತೆ ಮುಂದಿನ ವಾರ ನಗರದಲ್ಲಿ ಸಂಚರಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿಗಳ ಸಣ್ಣ ಹಾಗೂ ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಸೇರಿದಂತೆ 38 ಕೋಟಿ ರೂಪಾಯಿ ಮಂಡ್ಯ ನಗರಕ್ಕಾಗಿ ಬಿಡುಗಡೆ ಯಾಗಿದೆ. 30 ಕೋಟಿ ರೂಪಾಯಿಯ ಕ್ರಿಯಾ ಯೋಜನೆಯನ್ನು ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ಮುಖ್ಯಮಂತ್ರಿ ನಗರಕ್ಕೆ: ನ.23ಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನಗರಕ್ಕೆ ಆಗಮಿಸಲಿದ್ದು, ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಕೆಆರ್‌ಎಸ್ ಜಲಾಶಯ ವ್ಯಾಪ್ತಿಯ ನಾಲೆಗಳ ದುರಸ್ತಿಯನ್ನು 330 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಅಂದು ಅದಕ್ಕೂ ಚಾಲನೆ ನೀಡಲಿದ್ದಾರೆ. ನೀರಾವರಿ ಭವನ ಉದ್ಘಾಟನೆಯೂ ನೆರವೇರಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.