ADVERTISEMENT

ನಿಂತಲ್ಲಿಯೇ ತುಕ್ಕು ಹಿಡಿದ ಕಬ್ಬಿನ ಲಾರಿಗಳು!

ಅನಾಥವಾಗಿ ನಿಂತಿರುವ ಟ್ರಕ್‌ಗಳು, ರೈಲ್ವೆ ವ್ಯಾಗನ್‌ ಬಂದರೆ ಮಾತ್ರ ಕೆಲಸ

ಎಂ.ಎನ್.ಯೋಗೇಶ್‌
Published 14 ಮೇ 2018, 9:46 IST
Last Updated 14 ಮೇ 2018, 9:46 IST
ಮಂಡ್ಯದ ಮೈಷುಗರ್‌ ಕಾರ್ಖಾನೆ ರಸ್ತೆಯಲ್ಲಿ ಕಬ್ಬು ಪೂರೈಸುವ ಲಾರಿಗಳು ಸಾಲುಗಟ್ಟಿ ನಿಂತಿರುವುದು
ಮಂಡ್ಯದ ಮೈಷುಗರ್‌ ಕಾರ್ಖಾನೆ ರಸ್ತೆಯಲ್ಲಿ ಕಬ್ಬು ಪೂರೈಸುವ ಲಾರಿಗಳು ಸಾಲುಗಟ್ಟಿ ನಿಂತಿರುವುದು   

ಮಂಡ್ಯ: ಜಿಲ್ಲೆಯ ಜೀವನಾಡಿಯಾಗಿದ್ದ ಮೈಷುಗರ್‌ ಕಾರ್ಖಾನೆ ಸದ್ದು ನಿಲ್ಲಿಸಿದ ನಂತರ ಕಬ್ಬು ಪೂರೈಸುತ್ತಿದ್ದ 300ಕ್ಕೂ ಹೆಚ್ಚು ಲಾರಿಗಳಿಗೆ ಕೆಲಸವಿಲ್ಲದಂತಾಗಿದೆ. ವರ್ಷಕ್ಕೆ 10 ತಿಂಗಳು ಬಿಡುವಿಲ್ಲದೇ ಓಡುತ್ತಿದ್ದ ಈ ಲಾರಿಗಳು ಈಗ ನಿಂತಲ್ಲೇ ತುಕ್ಕು ಹಿಡಿಯುತ್ತಿವೆ.

ಕಾಳಿಕಾಂಬ ದೇವಾಲಯದ ಮುಂದಿನ ರಸ್ತೆಯಿಂದ ಉಮ್ಮಡಹಳ್ಳಿ ಕಡೆಗೆ ಒಂದೂವರೆ ಕಿ.ಮೀವರೆಗೆ ನೂರಾರು ಲಾರಿಗಳು ಅನಾಥವಾಗಿ ನಿಂತಿವೆ. ಡ್ರೈವರ್‌ ಇಲ್ಲ, ಕ್ಲೀನರ್‌ ಇಲ್ಲ. ಟೈರ್‌ನಲ್ಲಿ ಗಾಳಿ ಇಲ್ಲ. ಈ ಬಗ್ಗೆ ವಿಚಾರಿಸಿದರೆ ಲಾರಿ ಮಾಲೀಕರು ಹಾಗೂ ಚಾಲಕರು ಅನುಭವಿಸುತ್ತಿರುವ ಗೋಳಿನ ಕತೆ ಬಿಚ್ಚಿಕೊಳ್ಳುತ್ತದೆ. ಕಳೆದ ನಾಲ್ಕು ದಶಕಗಳಿಂದ ಮೈಷುಗರ್‌ ಕಾರ್ಖಾನೆಗೆ ಕಬ್ಬು ಪೂರೈಸುತ್ತಿದ್ದ ಲಾರಿಗಳಿವು. ಮಾಲೀಕರು ತಾತನ ಕಾಲದಿಂದಲೂ ಕಬ್ಬಿನ ಲಾರಿ ಓಡಿಸುತ್ತಲೇ ಜೀವನ ಕಟ್ಟಿಕೊಂಡಿದ್ದಾರೆ. ದೊಡ್ಡ ಹೊಟ್ಟೆಯ ಈ ಲಾರಿಗಳನ್ನು ಕಬ್ಬು ತುಂಬುವುದಕ್ಕಾಗಿಯೇ ವಿಶೇಷ
ವಾಗಿ ವಿನ್ಯಾಸ ಮಾಡಿಸಲಾಗಿದೆ. ಕಬ್ಬು ಅಥವಾ ಮೂಟೆ ತುಂಬುವ ವ್ಯವಹಾರಕ್ಕಷ್ಟೇ ಇವು ಸೀಮಿತ. ಆದರೆ ಮೈಷುಗರ್‌ ಕಾರ್ಖಾನೆ ಸ್ಥಗಿತಗೊಂಡಿರುವ ಕಾರಣ ಈ ಲಾರಿಗಳ ಮಾಲೀಕರ ಬದುಕು ಬೀದಿಗೆ ಬಿದ್ದಿದೆ.

ಲಾರಿ ನಿಲ್ಲಿಸುವುದಕ್ಕೂ ಜಾಗವಿಲ್ಲದೆ ಮಾಲೀಕರು ಕಾರ್ಖಾನೆ ರಸ್ತೆ ಬದಿಯಲ್ಲೇ ನಿಲ್ಲಿಸಿದ್ದಾರೆ. ಎರಡೂ ಕಡೆ ಲಾರಿಗಳು ಸಾಲಗಟ್ಟಿ ನಿಂತಿವೆ. ರಸ್ತೆಗಳಲ್ಲಿ ಇತರ ವಾಹನಗಳು ಓಡಾಡಲು ಸಾಧ್ಯವಾಗದಂತೆ ಇಡೀ ರಸ್ತೆಯನ್ನು ಆವರಿಸಿಕೊಂಡಿವೆ. ಒಂದು ವಾಹನ ಬಂದರೆ ಇನ್ನೊಂದು ವಾಹನ ನಿಂತು ಮುಂದಕ್ಕೆ ಹೋಗಬೇಕು. ಏಕ ಕಾಲದಲ್ಲಿ ಎರಡು ವಾಹನ ಓಡಾಡಲು ಸಾಧ್ಯವಿಲ್ಲ. ಅಲ್ಲದೆ ಜನರು ಲಾರಿ ಮರೆಗೆ ತೆರಳಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಸುತ್ತಲೂ ದುರ್ವಾಸನೆ ಹರಡಿದೆ.

ADVERTISEMENT

‘ಮಂಡ್ಯದಲ್ಲಿ ಒಂದು ಕಬ್ಬಿನ ಲಾರಿ ಇಟ್ಟಿದ್ದಾನೆ ಎಂದರೆ ಒಂದು ಕಾಲದಲ್ಲಿ ಅವನೇ ಶ್ರೀಮಂತ. ಈಗ ಲಾರಿ ಇಟ್ಟಿರುವವನೇ ಸಾಲಗಾರ. ಮೈಷುಗರ್‌ ಕಾರ್ಖಾನೆ ಸೇರಿ, ನಾವು ಕೊಪ್ಪ ಸಕ್ಕರೆ ಕಂಪನಿ, ಭಾರತೀನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಗೂ ಕಬ್ಬು ಪೂರೈಸುತ್ತಿದ್ದೆವು. ಈಗ ಅದೆಲ್ಲಾ ಇತಿಹಾಸ’ ಎಂದು ಲಾರಿ ಮಾಲೀಕ ರಾಜು ಬೇಸರ ವ್ಯಕ್ತಪಡಿಸಿದರು.

ಬದುಕು ಉಳಿಸಿದ ಗೂಡ್‌ಶೆಡ್‌:
ಮೈಷುಗರ್‌ ಸಮೀಪದಲ್ಲೇ ಇರುವ ರೈಲ್ವೆ ಗೂಡ್‌ಶೆಡ್‌ನಿಂದ ಕೆಲ ಲಾರಿ ಈಗ ಮಾಲೀಕರು ಜೀವನ ಕಂಡು
ಕೊಂಡಿದ್ದಾರೆ. ತಿಂಗಳಿಗೆ 4–5 ಬಾರಿ ರೈಲ್ವೆ ವ್ಯಾಗನ್‌ನಲ್ಲಿ ರಸಗೊಬ್ಬರ, ಅಕ್ಕಿ, ಸಿಮೆಂಟ್‌, ಮರಳು ಮುಂತಾದ ಸಾಮಗ್ರಿ ಬರುತ್ತದೆ. ಆ ವಸ್ತುಗಳನ್ನು ವಿವಿಧೆಡೆ ಗೋದಾಮುಗಳಿಗೆ, ಅಂಗಡಿಗಳಿಗೆ ಸಾಗಿಸುವ ಕೆಲಸ ಈ ಲಾರಿಗಳಿಗೆ ಸಿಗುತ್ತದೆ. ಅದೂ ನಿತ್ಯ ಇರುವುದಿಲ್ಲ. ಒಮ್ಮೆ ವ್ಯಾಗನ್‌ ಬಂದರೆ 50–60 ಲಾರಿಗಳಿಗೆ ಮಾತ್ರ ಕೆಸಲ. ಮತ್ತೊಮ್ಮೆ ವಾಗನ್‌ ಬಂದಾಗ, ಕಳೆದ ಬಾರಿ ವಸ್ತುಗಳನ್ನು ಸಾಗಿಸಿದ ಲಾರಿಗಳನ್ನು ಬಿಟ್ಟು ಬೇರೆ ಲಾರಿಗಳಿಗೆ ಕೆಲಸ ದೊರೆಯುತ್ತದೆ. ಹಾಗೆಯೇ ಒಂದು ಕರಾರಿನ ರೂಪದಲ್ಲಿ ತಿಂಗಳಲ್ಲಿ ಐದಾರು ದಿನ ಮಾತ್ರ ಲಾರಿಗಳು ಓಡುತ್ತಿವೆ. ಇನ್ನುಳಿದಂತೆ ಮುಷುಗರ್‌ ಕಾರ್ಖಾನೆ ರಸ್ತೆಯಲ್ಲೇ ನಿಂತಿರುತ್ತವೆ.

ಮೈಷುಗರ್‌ ಕಾರ್ಖಾನೆಯಿಂದ ತೆರವು

ಮೊದಲು ಈ ಲಾರಿಗಳನ್ನು ಮೈಷುಗರ್‌ ಈಜುಕೊಳದ ಪಕ್ಕದ ಮೈದಾನದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು. ವಿಶಾಲ ಮೈದಾನದಲ್ಲಿ ಉಚಿತವಾಗಿ ಲಾರಿ ನಿಲ್ಲಿಸಲು ಕಾರ್ಖಾನೆ ಸಿಬ್ಬಂದಿಯೇ ಅವಕಾಶ ಕಲ್ಪಿಸಿದ್ದರು. ಆದರೆ ಈಚೆಗೆ ಮೈದಾನದಿಂದ ಲಾರಿಗಳನ್ನು ತೆರವುಗೊಳಿಸಲಾಗಿದ್ದು ಅನಿವಾರ್ಯವಾಗಿ ಮಾಲೀಕರು ರಸ್ತೆ ಬದಿಯಲ್ಲಿ ನಿಲ್ಲಿಸುವಂತಾಗಿದೆ. ಮೈದಾನದಲ್ಲಿ ಮರಳು ಮಾರಾಟ ಕೇಂದ್ರ ನಿರ್ಮಿಸುವ ಉದ್ದೇಶದಿಂದ ತೆರವುಗೊಳಿಸಲಾಗಿದೆ. ಆದರೆ ಅಲ್ಲಿ ಈಗ ಯಾವುದೇ ಕೇಂದ್ರ ಸ್ಥಾಪಿಸಿಲ್ಲ. ಹೀಗಾಗಿ ಲಾರಿ ಮಾಲೀಕರ ಸಂಘದ ಸದಸ್ಯರು ಕಾರ್ಖಾನೆ ಆಡಳಿತ ಮಂಡಳಿ ಕ್ರಮದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

‘ಮರಳು ಮಾರಾಟ ಕೇಂದ್ರ ನೆಪ ಹೇಳಿ ನಮ್ಮನ್ನು ತೆರವುಗೊಳಿಸಿದರು. ಲಾರಿ ನಿಲುಗಡೆಗೆ ಹಣ ಪಡೆಯುವುದೇ ಅವರ ಉದ್ದೇಶವಾಗಿತ್ತು. ಈಚೆಗೆ ಟೆಂಡರ್‌ ಕರೆಯಲಾಗಿತ್ತು. ನಾವು ಹಣ ಪಾವತಿ ಮಾಡಿದ್ದೇವೆ. ಆದರೂ ಪಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಎಲ್ಲಾ ಜಿಲ್ಲೆಗಳಲ್ಲಿ ಟ್ರಕ್‌ ನಿಲ್ದಾಣಗಳಿವೆ. ಮಂಡ್ಯದಲ್ಲಿ ಮಾತ್ರ ಟ್ರಕ್‌ ನಿಲುಗಡೆಗೆ ಯಾವುದೇ ನಿಲ್ದಾಣ ವ್ಯವಸ್ಥೆ ಇಲ್ಲ’ ಎಂದು ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಬಿ.ಎಂ.ನಾಗರಾಜ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.