ADVERTISEMENT

ನಿರ್ವಹಣೆ ಇಲ್ಲದ ಕೊಳಚೆ ನೀರು ಸಂಸ್ಕರಣಾ ಘಟಕ

ಎಂ.ಎನ್.ಯೋಗೇಶ್‌
Published 25 ಡಿಸೆಂಬರ್ 2017, 5:51 IST
Last Updated 25 ಡಿಸೆಂಬರ್ 2017, 5:51 IST
ಮಂಡ್ಯ ನಗರದ ಹೊರವಲಯ ಯತ್ತಗದಹಳ್ಳಿಯಲ್ಲಿ ಇರುವ ಕೊಳಚೆ ನೀರು ಸಂಸ್ಕರಣಾ ಘಟಕ
ಮಂಡ್ಯ ನಗರದ ಹೊರವಲಯ ಯತ್ತಗದಹಳ್ಳಿಯಲ್ಲಿ ಇರುವ ಕೊಳಚೆ ನೀರು ಸಂಸ್ಕರಣಾ ಘಟಕ   

ಮಂಡ್ಯ: ನಗರದ ಹೊರವಲಯದ ಯತ್ತಗದಹಳ್ಳಿ ಕೊಳಚೆ ನೀರು ಸರಂಕ್ಷಣಾ ಘಟಕಕ್ಕೆ ನಿರ್ವಹಣಾ ಕೊರತೆ ಎದುರಾಗಿದೆ. ಮೋಟಾರ್‌ಗಳು ಕೆಟ್ಟು ಹೋಗಿರುವ ಕಾರಣ ಕಳೆದ ಮೂರು ತಿಂಗಳಿಂದ ಘಟಕ ಸ್ಥಗಿತಗೊಂಡಿದೆ. ಹೀಗಾಗಿ ಕೊಳಚೆ ನೀರು ಕೆರೆ ಸೇರುತ್ತಿದ್ದು ಜಲಚರಗಳಿಗೆ ಅಪಾಯ ಎದುರಾಗಿದೆ.

ಇಡೀ ನಗರದ ಕೊಳಚೆ ನೀರು ಚರಂಡಿ ಮೂಲಕ ಈ ಸಂಸ್ಕರಣಾ ಘಟಕದ ಸೇರುತ್ತದೆ. ಈ ನೀರನ್ನು ಯತ್ತಗದಹಳ್ಳಿ ಘಟಕದಲ್ಲಿ ಸಂಸ್ಕರಣ ಮಾಡಿ ಸಮೀಪದ ಗುತ್ತಲು ಕೆರೆಗೆ ನೀರು ಹರಿಸಲಾಗುತ್ತದೆ. ಗುತ್ತಲು ಕೆರೆಯಿಂದ ನೀರು ಹೆಬ್ಬಾಳ ಸೇರಿ ನಂತರ ಸೂಳೆಕೆರೆ ಮೂಲಕ ಕಾವೇರಿ ನದಿ ಸೇರುತ್ತದೆ. ಈ ಘಟಕದಲ್ಲಿ ನೀರು ಸಂಸ್ಕರಣೆಯಾಗದಿದ್ದರೆ ಗುತ್ತಲು ಕೆರೆ, ಹೆಬ್ಬಾಳ, ಸೂಳೆಕೆರೆ ಸೇರಿ ಕಾವೇರಿ ನದಿಗೂ ಕಲ್ಮಶ ಸೇರುತ್ತದೆ. ಘಟಕದಲ್ಲಿ ಎರಡು ಮೋಟಾರ್‌ಗಳಿವೆ. ಒಂದು ಕೆಟ್ಟರೆ ಮತ್ತೊಂದನ್ನು ಬಳಸುವ ಅವಕಾಶವಿದೆ. ಆದರೆ ಕೆಲವು ವೇಳೆ ಎರಡೂ ಯಂತ್ರಗಳೂ ಕೆಟ್ಟು ಇಡೀ ಘಟಕ ಸ್ತಬ್ಧಗೊಳ್ಳುತ್ತದೆ.

‘ಸಂಸ್ಕರಣಾ ಘಟಕವನ್ನು ನಗರಸಭೆ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ವಿಷಯವಾಗಿ ನಾನು ಒಮ್ಮೆ ಪರಿಸರ ಅಧಿಕಾರಿಗೆ ದೂರು ನೀಡಿದ್ದೆ. ನಂತರ ನಗರಸಭೆಗೆ ಪರಿಸರ ಅಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದರು. ಇಷ್ಟಾದರೂ ನಗರಸಭೆ ಅಧಿಕಾರಿಗಳು ಘಟಕವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕೊಳಚೆ ನೀರನ್ನು ಸರಿಯಾಗಿ ಸಂಸ್ಕರಣೆ ಮಾಡದಿದ್ದರೆ ಪರಿಸರಕ್ಕೆ ಹಾನಿಯಾಗುತ್ತದೆ. ಜೊತೆಗೆ ಘಟಕದ ಅಕ್ಕಪಕ್ಕ ವಾಸ ಮಾಡುವ ಜನರಿಗೆ ರೋಗರುಜಿನ ಹರಡುತ್ತವೆ’ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್‌.ರವೀಂದ್ರ ದೂರಿದರು.

ADVERTISEMENT

‘ಹಳೆಯ ಮೋಟಾರ್‌ಗಳು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಈಗ ಮೋಟಾರ್‌ ರಿಪೇರಿಯಾಗಿದ್ದು ಶೀಘ್ರ ಘಟಕ ಕಾರ್ಯಾರಂಭ ಮಾಡಲಿದೆ. ಟ್ಯಾಂಕ್‌ನಲ್ಲಿ ನೀರು ತುಂಬಿಕೊಂಡಿದ್ದು ನೀರನ್ನು ಹೊರ ಹಾಕುವ ಕೆಲಸ ಮಾಡಿಸುತ್ತಿದ್ದೇವೆ. ಇನ್ನೆರಡು ದಿನದಲ್ಲಿ ಮೋಟಾರ್‌ ಬಿಡಲಾಗುವುದು’ ಎಂದು ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಪ್ರತಾಪ್‌ ತಿಳಿಸಿದರು.

‘ಸಂಸ್ಕರಣಾ ಘಟಕದ ನಿರ್ವಹಣಾ ಸಿಬ್ಬಂದಿ ಇಲ್ಲಿಗೆ ಬರುವುದೇ ಇಲ್ಲ. ಇದೊಂದು ರೀತಿಯ ಭೂತಬಂಗಲೆಯಂತಿದೆ. ಇಲ್ಲೊಂದು ದೀಪದ ವ್ಯವಸ್ಥೆಯನ್ನೂ ಮಾಡಿಲ್ಲ, ಒಂದು ಬೋರ್ಡ್‌ ಕೂಡ ಹಾಕಿಲ್ಲ. ಸಮೀಪದಲ್ಲಿ ಸ್ಮಶಾನ ಇರುವುದರಿಂದ ಇಲ್ಲಿ ಒಬ್ಬರೇ ತಿರುಗಾಡಲು ಭಯವಾಗುತ್ತದೆ’ ಎಂದು ಯತ್ತಗದಹಳ್ಳಿಯ ನಿವಾಸಿ ರಮೇಶ್ ಹೇಳಿದರು.

₹ 18 ಕೋಟಿ ವೆಚ್ಚ: ಮೂರು ಎಕರೆ ವಿಸ್ತೀರ್ಣದಲ್ಲಿ ಇರುವ ಸಂಸ್ಕರಣಾ ಘಟಕವನ್ನು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ₹ 18 ಕೋಟಿ ವೆಚ್ಚದಲ್ಲಿ 10 ವರ್ಷದ ಹಿಂದೆ ನಿರ್ಮಿಸಿತು. ನಂತರ ಘಟಕವನ್ನು ನಗರಸಭೆಗೆ ಹಸ್ತಾಂತರ ಮಾಡಿತು. ಕೆಲಕಾಲ ಘಟಕವನ್ನು ಜಲಮಂಡಳಿಯೇ ನಿರ್ವಹಣೆ ಮಾಡುತ್ತಿತ್ತು. ನಿರ್ವಹಣಾ ವೆಚ್ಚವನ್ನು ನಗರಸಭೆ ಭರಿಸುತ್ತಿತ್ತು. ಆದರೆ ಈಚೆಗೆ ಜಲಮಂಡಳಿ ನಿರ್ವಹಣಾ ವೆಚ್ಚವಾಗಿ ₹ 47 ಲಕ್ಷ ಬೇಡಿಕೆ ಇಟ್ಟ ಕಾರಣ ನಗರಸಭೆ ಘಟಕವನ್ನು ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ತಾನೇ ವಹಿಸಿಕೊಂಡಿತು. ಚರಂಡಿ ನೀರಿನ ನಿರ್ವಹಣೆ ಕುರಿತು ನಗರಸಭೆ ಸಿಬ್ಬಂದಿಗೆ ಸರಿಯಾಗಿ ಜ್ಞಾನವಿಲ್ಲ. ಹೀಗಾಗಿ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಗರಸಭೆ ಮೂಲಗಳು ತಿಳಿಸಿವೆ.

‘ಜಲಮಂಡಳಿ ಅಧಿಕಾರಿಗಳ ನೆರವಿನಿಂದ ಘಟಕವನ್ನು ನಾವೇ ನಿರ್ವಹಣೆ ಮಾಡುತ್ತಿದ್ದೇವೆ. ಮೋಟಾರ್‌ಗಳು ಕೆಟ್ಟಾಗ ಸ್ವಲ್ಪ ಸಮಸ್ಯೆಯಾಗುತ್ತಿದೆ. ಸಮಸ್ಯೆಯನ್ನು ಶೀಘ್ರ ಸರಿಪಡಿಸಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಟಿ.ಎನ್‌.ನರಸಿಂಹಮೂರ್ತಿ ಹೇಳಿದರು.

ಒಡೆದ ಪೈಪ್‌; ಕೆರೆಗೆ ಕೊಳಚೆ

ನಗರದ ಕೆಲವೆಡೆ ಒಳಚರಂಡಿ ಪೈಪ್‌ಲೈನ್‌ ಒಡೆದು ಹೋಗಿರುವ ಕಾರಣ ಕೊಳಚೆ ನೀರು ಸಮೀಪದ ಕೆರೆಗೆ, ಹಳ್ಳಗಳಿಗೆ ಸೇರುತ್ತಿದೆ. ಈ ಬಗ್ಗೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಒಡೆದ ಪೈಪ್‌ಲೈನ್‌ಗಳನ್ನು ದುರಸ್ತಿ ಮಾಡುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

‘ಇಂದಿರಾನಗರದಲ್ಲಿ ಪೈಪ್‌ಲೈನ್‌ ಒಡೆದು ಆರು ತಿಂಗಳಾಗಿವೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊಳಚೆ ನೀರು ಸಮೀಪದ ಗುತ್ತಲು ಕೆರೆಗೆ ಹರಿದು ಹೋಗುತ್ತಿದೆ. ಸಾವಿರಾರು ಮೀನುಗಳು ಸತ್ತು ಹೋಗಿವೆ’ ಎಂದು ಇಂದಿರಾ ನಗರ ನಿವಾಸಿ ಬೋರೇಗೌಡ ತಿಳಿಸಿದರು.

8.9 ಎಂ.ಎಲ್‌.ಡಿ ಸಂಸ್ಕರಣಾ ಘಟಕದ ಸಾಮರ್ಥ್ಯ
3 ಎಕರೆ ಘಟಕದ ವಿಸ್ತೀರ್ಣ
₹ 18 ಕೋಟಿ ಘಟಕ ನಿರ್ಮಾಣ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.