ADVERTISEMENT

ನೀತಿ ಸಂಹಿತೆ ಉಲ್ಲಂಘನೆ: ಬೈಕ್ ರ್‍ಯಾಲಿಗೆ ತಡೆ

ಜೆಡಿಎಸ್‌ ಟಿಕೆಟ್‌ಗೆ ಒತ್ತಾಯಿಸಿ ಬುಲೆಟ್‌ ಏರಿದ್ದ ಮಹಿಳೆಯರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 13:06 IST
Last Updated 2 ಏಪ್ರಿಲ್ 2018, 13:06 IST

ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಹಿಳೆಗೆ ಜೆಡಿಎಸ್‌ ಟಿಕೆಟ್‌ ನೀಡುವಂತೆ ಒತ್ತಾಯಿಸಿ ಮಹಿಳಾ ಮುಖಂಡರು ಭಾನುವಾರ ನಡೆಸಲು ಮುಂದಾದ ಬೈಕ್‌ ರ್‍ಯಾಲಿಯನ್ನು ಚುನಾವಣಾ ಕಣ್ಗಾವಲು ಸಮಿತಿ ಸಿಬ್ಬಂದಿ ತಡೆದು ವಾಹನಗಳನ್ನು ಜಪ್ತಿ ಮಾಡಿದರು.ನಗರದ ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಜೆಡಿಎಸ್‌ ನಾಯಕಿ ಜಿ.ಬಿ.ಪ್ರಭಾ ನೇತೃತ್ವದಲ್ಲಿ ರ‍್ಯಾಲಿ ಆಯೋಜನೆಯಾಗಿತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪೊಲೀಸರು ವಾಹನ ತಡೆಯುತ್ತಿದ್ದಂತೆ ಹಿಂದೆ ಇದ್ದ ನೂರಾರು ಮಹಿಳೆಯರು ಬೈಕ್‌, ಸ್ಕೂಟರ್‌ಗೆ ಕಟ್ಟಿದ್ದ ಜೆಡಿಎಸ್‌ ಬಾವುಟ ಕಿತ್ತು ಹಾಕಿ ಪರಾರಿಯಾದರು. ಪೊಲೀಸರು ಮುಂದೆ ಬರುತ್ತಿದ್ದ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಲು ಹೇಳಿ ಜಪ್ತಿ ಮಾಡಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

‘ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಮಹಿಳಾ ಕಾರ್ಯಕರ್ತೆಯಾಗಿ ಹಲವು ವರ್ಷಗಳಿಂದ ಸೇವೆ ಮಾಡಿದ್ದೇನೆ. ಹೀಗಾಗಿ ನಾನು ಜೆಡಿಎಸ್‌ ಟಿಕೆಟ್‌ನ ಪ್ರಭಲ ಆಕಾಂಕ್ಷಿಯಾಗಿದ್ದೇನೆ. ವರಿಷ್ಠರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಲು ಕಾರ್ಯಕರ್ತರೊಂದಿಗೆ ಉಮ್ಮಡಹಳ್ಳಿ ಗೇಟ್‌ನಿಂದ ಕಿರಗಂದೂರು ವೃತ್ತದವರೆಗೆ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ರ್‍ಯಾಲಿ ನಡೆಸಲು ಮಾರ್ಚ್‌ 31ರಂದು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಾಲಾಗಿತ್ತು. ಆದರೆ, ಜಿಲ್ಲಾಧಿಕಾರಿ ಶನಿವಾರ ರಾತ್ರಿ 10 ಗಂಟೆಗೆ ಬೈಕ್‌ ರ್‍ಯಾಲಿ ರದ್ದು ಮಾಡುವಂತೆ ನಿರ್ದೇಶನ ನೀಡಿದರು. ಆದರೆ, ಕಾರ್ಯಕರ್ತರಿಗೆ ರಾತ್ರಿ ವೇಳೆ ರ್‍ಯಾಲಿ ರದ್ದಾದ ವಿಚಾರ ತಿಳಿಸಲಿಲ್ಲ. ಭಾನುವಾರ ಬೆಳಿಗ್ಗೆ ಬಂದ ಕಾರ್ಯಕರ್ತರರೊಂದಿಗೆ ಯಾವುದೆ ರಸ್ತೆ ತಡೆ ಮಾಡದೆ ಶಾಂತಿಯುತವಾಗಿ ಬೈಕ್ ಸಂಚಾರ ಮಾಡಲು ಮುಂದಾದೆವು. ಆದರೂ, ರಾಜಕೀಯ ಪ್ರೇರಿತವಾಗಿ ಪೊಲೀಸರು ವಾಹನ ಜಪ್ತಿ ಮಾಡಿದ್ದಾರೆ’ ಎಂದು ಪ್ರಭಾ ಹೇಳಿದರು. ಶಕುಂತಲಾ, ಮಂಗಳಾ, ಸರೋಜಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT