ADVERTISEMENT

ನೀರು, ಕನಿಷ್ಠ ಕೂಲಿಗಾಗಿ ಹೋರಾಟ

ದಿನಗೂಲಿ, ಗುತ್ತಿಗೆ ನೌಕರರ ಪೂರ್ವಭಾವಿ ಸಭೆಯಲ್ಲಿ ಕೆ.ಎಸ್‌.ಶರ್ಮಾ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 7:21 IST
Last Updated 18 ಜೂನ್ 2018, 7:21 IST

ಮಂಡ್ಯ: ‘ಸ್ವಾತಂತ್ರ್ಯ ಬಂದು 70 ವರ್ಷವಾದರೂ ಶುದ್ಧ ಕುಡಿಯುವ ನೀರು ಒದಗಿಸಲು ಹಾಗೂ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಲ್ಲಿ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ. ನೀರು ಹಾಗೂ ಕನಿಷ್ಠ ವೇತನಕ್ಕೆ ಒತ್ತಾಯಿಸಿ ಜುಲೈ ತಿಂಗಳಲ್ಲಿ ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದು ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲದ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್.ಶರ್ಮಾ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ದಿನಗೂಲಿ ಹಾಗೂ ಗುತ್ತಿಗೆ ನೌಕರರ ಪೂರ್ವಭಾವಿ ಸಭೆಯಲ್ಲಿ ನೌಕರರ ಸಮಸ್ಯೆ ಆಲಿಸಿ ಮಾತನಾಡಿದರು.

‘ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ದಿನಗೂಲಿ ನೌಕರರು, ಗುತ್ತಿಗೆ ನೌಕರರು, ದಿನಗೂಲಿ ನೌಕರಿಯಿಂದ ನಿವೃತ್ತಿ ಹೊಂದಿದವರು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅಸಂಘಟಿತವಾಗಿ ದುಡಿಯುವ ಕಾರ್ಮಿಕರ ಸಮಸ್ಯೆಗಳ ಪಟ್ಟಿ ತಯಾರಿಸಿ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ನಂತರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸಲಾಗುವುದು. ಕಾಯಂ ನೌಕರರ ಹೊರತಾದ ಎಲ್ಲಾ ಕಾರ್ಮಿಕರು ಹಾಗೂ ನೌಕರರು ಈ ಹೋರಾಟದಲ್ಲಿ ಪಾಲ್ಗೊಂಡು ಜೀವನ ಭದ್ರತೆ ಪಡೆದುಕೊಳ್ಳಬೇಕು’ ಎಂದರು.

ADVERTISEMENT

‘ಈ ಕಾರಣಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಹತ್ತು ಜಿಲ್ಲೆಗಳಲ್ಲಿ ಸಭೆ ಮಾಡಿದ್ದೇನೆ. ಹೊರಗುತ್ತಿಗೆ ನೌಕರರ ಸಮಸ್ಯೆ ಅತ್ಯಂತ ಹೆಚ್ಚಾಗಿದ್ದು ನಾಲ್ಕರಿಂದ ಆರು ತಿಂಗಳು ಕೆಲಸ ಕೊಟ್ಟು ನಂತರ ಅವರನ್ನು ತೆಗೆದು ಹಾಕಲಾಗುತ್ತಿದೆ. ನೌಕರರಿಗೆ ಸಂಪೂರ್ಣ ಕೆಲಸ ನೀಡಿದರೂ ಅತ್ಯಂತ ಕಡಿಮೆ ವೇತನ ನೀಡುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಮ್ಮ ಹೋರಾಟದ ಪ್ರತಿಫಲವಾಗಿ ರಾಜ್ಯದಲ್ಲಿ 66 ಸಾವಿರ ದಿನಗೂಲಿ ನೌಕರರನ್ನು ಕಾಯಂಗೊಳಿಸಲಾಗಿದೆ. ರಾಜ್ಯದಲ್ಲಿ ಈಗ 2.5 ಲಕ್ಷ ಹುದ್ದೆ ಖಾಲಿ ಇದ್ದು, ಅಧಿಸೂಚಿತ 23 ಸಾವಿರ ದಿನಗೂಲಿ ನೌಕರರಿಗೆ ಅವಕಾಶ ಮಾಡಿಕೊಡಬೇಕು. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ನೌಕರರನ್ನು ತೆಗೆದು ಹಾಕಬಾರದು. ಅವರನ್ನೇ ಕಾಯಂಗೊಳಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ಕನಿಷ್ಠ 100 ಮಾನವದಿನಗಳ ಕೂಲಿ ಕೊಡಬೇಕು. ಅದರೆ ಇಲ್ಲಿ ಯಾವುದೇ ಕೆಲಸ ನೀಡದೆ, ಜೆಸಿಬಿಯಿಂದ ಕೆಲಸ ಮಾಡಿಸಿ ಕೂಲಿಕಾರರ ಹಣ ಗುತ್ತಿಗೆದಾರರ ಕೈ ಸೇರುವಂತೆ ಮಾಡುತ್ತಿದ್ದಾರೆ’ ಎಂದರು.

‘ ಸ್ಥಳೀಯ ಸಮಸ್ಯೆಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಡಲು ಜೂನ್‌ 23 ರಿಂದ 30 ರವರೆಗೆ ರಾಜ್ಯದಾದ್ಯಂತ ಶಾಸಕರ ಸಂಪರ್ಕ ಸಪ್ತಾಹ ಆಚರಣೆ ಮಾಡಲಾಗುವುದು. ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿನ ಸೌಲಭ್ಯವಿದ್ದರೂ ಜಿಲ್ಲೆಯಾದ್ಯಂತ 160ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜೀವಕ್ಕೆ ಹಾನಿಕಾರಕ ಪ್ಲೋರೈಡ್‌ಯುಕ್ತ ನೀರು ಕುಡಿಯುತ್ತಿದ್ದಾರೆ. ಜಿಲ್ಲೆಯ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ನೈಟ್ರೇಟ್‌ಯುಕ್ತ ನೀರು ಪತ್ತೆಯಾಗಿದ್ದು, ಇದರಿಂದ ಮಹಿಳೆಯರ ಗರ್ಭಪಾತವಾಗುವ ಸಮಸ್ಯೆ ಉಂಟಾಗುತ್ತದೆ ’ ಎಂದು ಹೇಳಿದರು.

ಐಆರ್‌ಟಿಯುಸಿ ಪ್ರಧಾನ ಕಾರ್ಯದರ್ಶಿ ಜಯದೇವ ಅರಸು ಮಾತನಾಡಿ ‘ಜನರು ಮಾನಸಿಕವಾಗಿ ಸಂಘಟಿತರಾಗಿ ದಿನಗೂಲಿ ಹಾಗೂ ಕನಿಷ್ಠ ವೇತನಕ್ಕಾಗಿ ಹೋರಾಟ ಮಾಡಬೇಕಾಗಿದೆ. ಚುನಾವಣೆಯಲ್ಲಿ ಯಾವುದೇ ಪಕ್ಷ ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಒಬ್ಬರೂ ಮಾತನಾಡಲಿಲ್ಲ. ಕಾರ್ಮಿಕರಿಗೆ ಜೀವನ ಭದ್ರತೆ ಒದಗಿಸುವ ಭರವಸೆ ನೀಡಲಿಲ್ಲ’ ಎಂದರು.

ಆಂಧ್ರ ಪ್ರದೇಶದ ನೌಕರರ ಹೋರಾಟಗಾರ ಕೃಷ್ಣರಾವ್, ರಾಜ್ಯ ಸರ್ಕಾರಿ ನೌಕರರ ಸಂಘಟನೆ ಕಾರ್ಯದರ್ಶಿ ಬಿ.ಎಂ.ಅಪ್ಪಾಜಪ್ಪ, ಜಿಲ್ಲಾ ಘಟಕದ ಕಾರ್ಯದರ್ಶಿ ನರಸೇಗೌಡ, ನಾಗಮಂಗಲದ ಚಂದ್ರು, ಕೆ.ಆರ್.ಪೇಟೆಯ ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.