ADVERTISEMENT

ಪಡಿತರ ಚೀಟಿದಾರರ ನೋಂದಣಿ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 6:50 IST
Last Updated 21 ಸೆಪ್ಟೆಂಬರ್ 2011, 6:50 IST

ನಾಗಮಂಗಲ: ಪಂಚತಂತ್ರ ದತ್ತಾಂಶ ಯೋಜನೆಯಡಿ ರಾಜ್ಯದ ಎಲ್ಲಾ ಪಡಿತರದಾರರು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ಚೀಟಿ ನೊಂದಣಿ ಮಾಡಿಕೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಕೆ.ಕೃಷ್ಣಪ್ಪ ಮನವಿ ಮಾಡಿದರು. 

 ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು `ಗ್ರಾಮ ಪಂಚಾಯಿತಿಗಳಲ್ಲಿ ಪಡಿತರ ನೋಂದಣಿ ಮಾಡಲು ಬರುವ ಪಡಿತರದಾರರಿಂದ ಕಂದಾಯ ವಸೂಲಿ ಮಾಡಿಸಿಕೊಂಡು ನೋಂದಣಿ ಮಾಡಲಾಗುತ್ತಿದೆ. ಇದರಿಂದ ಬಡಜನರು ಹಣವಿಲ್ಲದೆ ನೋಂದಣಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಸರ್ಕಾರಕ್ಕೆ ಸರಿಯಾಗಿ ಪಡಿತರದಾರರ ಲೆಕ್ಕ ಸಿಗುತ್ತಿಲ್ಲ ಎಂದರು.

ಕಂದಾಯ ವಸೂಲಾತಿಗೂ ಹಾಗೂ ಪಡಿತರ ನೋಂದಣಿಗೂ ಯಾವುದೇ ಸಂಬಂಧವಿಲ್ಲ. ಜನತೆ ಈ ವಿಷಯದ ಬಗ್ಗೆ ಜಾಗೃತರಾಗಿ ನೋಂದಣಿ ಮಾಡಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಪಡಿತರ ಚೀಟಿ ವಜಾಗೊಳ್ಳುವ ಹಾಗು ಸರ್ಕಾರ ಮುಟ್ಟುಗೋಲು ಹಾಕಿ ಕೊಳ್ಳುವ ಸಾಧ್ಯತೆ ಇದೆ ಎಂದರು.

ಖಾತೆ ತೆರೆಯಲು ಒತ್ತಡವಿಲ್ಲ : ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಲ್ಲಿ ಸಾಕಷ್ಟು ಗೊಂದಲ ಉಂಟಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಪದಾರ್ಥ ವಿತರಣೆಗೂ ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವುದಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿಷಯದ ಬಗ್ಗೆ ಯಾವುದೇ ಗೊಂದಲ ಮಾಡಿಕೊಳ್ಳಬಾರದು. ಇಚ್ಛೆ ಉಳ್ಳವರು ಮಾತ್ರ ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆ ತೆರೆಯಬಹುದಾಗಿದೆ ಎಂದರು.

ಪಡಿತರ ವಿತರಕರ ಸಂಘದ ತಾಲ್ಲೂಕು ಅಧ್ಯಕ್ಷ ಬಲರಾಮೇಗೌಡ, ನ್ಯಾಯಬೆಲೆ ಅಂಗಡಿ ಮಾಲೀಕ ಮುಳುಕಟ್ಟೆ ಶಿವರಾಮಯ್ಯ, ಮಹದೇವು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.