ADVERTISEMENT

ಪರಮ ಹಿಂದೂ ವಾದ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2012, 12:20 IST
Last Updated 28 ಜನವರಿ 2012, 12:20 IST

ಮಂಡ್ಯ: ವ್ಯಕ್ತಿಗತ ಅನುಕೂಲಕ್ಕಾಗಿ ಇಂದು ಎಲ್ಲರೂ ಜಾತಿ, ಧರ್ಮವನ್ನು ಬಳಸಿಕೊಳ್ಳುತ್ತಿದ್ದು, ಇದಕ್ಕಾಗಿ ರಾಜಕಾರಣಿಗಳನ್ನಷ್ಟೇ ದೂರುವುದು ಬೇಡ. ಆದರೆ, ಇದನ್ನೂ ಮೀರಿ ಎಲ್ಲರೂ ಹಿಂದೂಗಳೇ ಆಗಿ ವರ್ತಿಸಬೇಕಾಗಿದೆ ಎಂದು ಸಂಸದ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ಶುಕ್ರವಾರ ಕಲಾಮಂದಿರದಲ್ಲಿ ನಡೆದ ಹಿಂದೂ ಧರ್ಮಾಧಿಕಾರಿಗಳ ಸಮಾವೇಶ, ಪರಮ ಹಿಂದೂವಾದ ಅಭಿಯಾನಕ್ಕೆ ಚಾಲನೆ ಮತ್ತು ಕಾರ್ಯಕ್ರಮದ ಸಂಘಟಕ ಡಾ. ಪ್ರಶಾಂತ್ ಈಶ್ವರ್ ಅವರಿಂದ ಧಾರ್ಮಿಕ ಸೇವಾಶ್ರಮ ಪ್ರವೇಶ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲರೂ ಹಿಂದೂಗಳೇ ಆಗಿದ್ದರೂ ಪ್ರತ್ಯೇಕ ಜಾತಿಗಳಿವೆ. ಪ್ರತ್ಯೇಕವಾಗಿ ಬಾಳಬೇಕು ಎಂದು ಯಾರೂ ಹೇಳಿಲ್ಲ. ಲಾಭ ಪಡೆಯುವ ಕಾರಣಕ್ಕಾಗಿ ಜಾತಿ  ಬಳಕೆ ಆಗುತ್ತಿದೆ. ರಾಜಕಾರಣಿಗಳಷ್ಟೇ ಇದಕ್ಕೆ ಕಾರಣರಲ್ಲ. ಸೇವೆಯ ಬದ್ಧತೆ ಇರಬೇಕಾದ ವೈದ್ಯಕೀಯ ಕ್ಷೇತ್ರವು ಇದರಿಂದ ಹೊರತಲ್ಲ. ಅದೂ ವ್ಯಾಪಾರಿಕರಣವಾಗಿದೆ ಎಂದು ಟೀಕಿಸಿದರು.

ಕಡಿಮೆ ವೆಚ್ಚ ತಗಲಬಹುದಾದ ಚಿಕಿತ್ಸೆಗೂ ಇಂದು ದುಬಾರಿ ಶುಲ್ಕ ಪಡೆಯಲಾಗುತ್ತದೆ. ಇಂಥ ನಿದರ್ಶನಗಳು ಸಾಕಷ್ಟಿವೆ. ಇಂಥ ಸ್ಥಿತಿಯಲ್ಲಿ ಕಾರ್ಯಕ್ರಮದ ಸಂಘಟಕ ಪ್ರಶಾಂತ್ ಈಶ್ವರ್ ಸೇವಾ ಮನೋ ಭಾವದಿಂದ ಡಯಾಗ್ನೋಸ್ಟಿಕ್ ಸೆಂಟರ್ ಆರಂಭಿಸಿರುವುದು ಶ್ಲಾಘನೀಯ ಎಂದರು.

ಲಾಭದ ಉದ್ದೇಶವಿಲ್ಲದೇ, ಕೇವಲ ವೆಚ್ಚವನ್ನಷ್ಟೇ ಪಡೆಯುವ ಮೂಲಕ ಸೇವೆಯನ್ನು ಒದಗಿಸಲು ಡಾ. ಪ್ರಶಾಂತ್ ಮುಂದಾಗಿದ್ದಾರೆ. ಇಂಥ ಮನಸ್ಥಿತಿ ಎಲ್ಲರಿಗೂ ಬಂದಲ್ಲಿ ಸಮಸ್ಯೆಗಳೇ ಇರುವುದಿಲ್ಲ. ಈ ಚಿಂತನೆಗಾಗಿ ಅವರು ಅಭಿನಂದನಾರ್ಹರು ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕ ಭಾಷಣ ಮಾಡಿದ ಡಾ. ಈಶ್ವರ್ ಅವರು, ಸಮಾಜ ಸೇವೆ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿ ಎಲ್ಲರೂ ಜಾತಿಯ ನೆಲೆಗಟ್ಟಿನಿಂದ ಹೊರಬಂದು ಧರ್ಮದ ನೆಲೆಗಟ್ಟಿಗೆ ಸೇರಬೇಕಾಗಿದೆ. ಒಂದು ಹಂತದ ಬಳಿಕ ಧರ್ಮ ರಕ್ಷಣೆಗೆ ತೊಡಗಿಕೊಂಡಾಗಲೇ ಧರ್ಮದ ಉಳಿವು ಸಾಧ್ಯ ಎಂದು ಪ್ರತಿಪಾದಿಸಿದರು.

ಆದಿಚುಂಚನಗಿರಿ ಶಾಖಾಮಠದ ಪುರುಷೋತ್ತಮನಂದನಾಥ ಸ್ವಾಮೀಜಿ, ವಿಶ್ವಕರ್ಮ ಸಮಾಜದ ಅಭಯ ಹಸ್ತೆ ಆದಿಲಕ್ಷ್ಮಿ ಸಂಸ್ಥಾನದ ನೀಲಕಂಠಚಾರ್ಯ ಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದಪುರಿ ಸ್ವಾಮೀಜಿ, ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಶುಭ ಹಾರೈಸಿದರು.

ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದು, ಮಾಜಿ ಸಚಿವ ಎಂ. ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮರಿಗೌಡ, ಮಿಮ್ಸ ವೈದ್ಯಕೀಯ ಅಧೀಕ್ಷಕ ಡಾ. ರಾಮಲಿಂಗೇಗೌಡ ಅವರು ವೇದಿಕೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.