ADVERTISEMENT

ಪಿಎಸ್‌ಎಸ್‌ಕೆ ಆಡಳಿತ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 5:40 IST
Last Updated 4 ಅಕ್ಟೋಬರ್ 2011, 5:40 IST

ಪಾಂಡವಪುರ: ಇಲ್ಲಿನ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಕಾರ್ಯವೈಖರಿಯಿಂದಾಗಿ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ ಎಂದು ಆರೋಪಿಸಿರುವ ಶಾಸಕ ಸಿ.ಎಸ್.ಪುಟ್ಟರಾಜು,ಕಾರ್ಖಾನೆ ಉಳಿಸಲು ಆಗ್ರಹಿಸಿ ಸೋಮವಾರ ಕಾರ್ಯಕರ್ತರೊಂದಿಗೆ ಪ್ರತಿಭಟನೆ ನಡೆಸಿದರು.

ಕಾರ್ಖಾನೆಯ ಎದುರು ಬೆಳಿಗ್ಗೆ 11-30ರಲ್ಲಿ ಜಮಾಯಿಸಿದ ಕಾರ್ಯಕರ್ತರು ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗುತ್ತಿದೆ, ಸಕ್ಕರೆ ಉತ್ಪಾದನೆ ಇಳಿಮುಖವಾಗುತ್ತಿದೆ. ಕಬ್ಬಿನ ರಸ ಉತ್ಪಾದನೆಯಲ್ಲಿ ಬಳಕೆಯಾಗದೆ ನಾಲೆಗಳಲ್ಲಿ ಹರಿದು ವ್ಯಯವಾಗುತ್ತಿದೆ ಎಂದು ಆರೋಪಿಸಿದರು.

ಇದರಿಂದಾಗಿ ಕಾರ್ಖಾನೆ ಮುಚ್ಚುವ ಪರಿಸ್ಥಿತಿ ನಿರ್ಮಾಣಗೊಳ್ಳಲಿದೆ. ಕಾರ್ಖಾನೆಯ ಅಧ್ಯಕ್ಷರು ಅಭಿವೃದ್ಧಿಗೆ ಶ್ರಮಿಸದೇ ಕಾರ್ಖಾನೆಯನ್ನು ಉಳಿಸುವ ಕುರಿತು  ಕೇವಲ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಮೂಲಕ ರೈತರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.

`ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವಧಿಯಲಿ ಕಾರ್ಖಾನೆಯ ನಿರ್ವಹಣೆಯನ್ನು ಮೈಷುಗರ್‌ಗೆ ವ್ಯಾಪ್ತಿಯಡಿ ತಂದುದೇ  ಕಾರ್ಖಾನೆಯ ಅವನತಿಗೆ ಕಾರಣವಾಯಿತು ಎಂದರು.

ಈ  ಹಿಂದೆ ಕಾರ್ಖಾನೆಯನ್ನು ನಡೆಸುತ್ತಿದ್ದ ಕೊಠಾರಿ ಷುಗರ್ಸ್‌ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಪ್ರತಿ ದಿನ 3 ಸಾವಿರ ಟನ್‌ಗೂ ಮಿಗಿಲಾಗಿ ಕಬ್ಬು ಅರೆಯುತ್ತಿತ್ತು. ಇಂದು, ಬಿಜೆಪಿ ಅವಧಿಯಲ್ಲಿ ರೂ. 6 ಕೋಟಿ ಖರ್ಚು ಮಾಡಿ ಯಂತ್ರಗಳನ್ನು ರಿಪೇರಿ ಮಾಡಿಸಿದ್ದರೂ ಬಾಯ್ಲರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರು.

ಕಳೆದ ಹಂಗಾಮಿನಲ್ಲಿಯೂ ಕಾರ್ಖಾನೆಗೆ ರೂ. 52 ಕೋಟಿ ನಷ್ಟವುಂಟಾಗಿದೆ. ಇದಕ್ಕೆ ಅಧ್ಯಕ್ಷ ನಾಗರಾಜಪ್ಪ ಅವರ ಅಸಮರ್ಥತೆ, ಬೇಜವಾಬ್ದಾರಿತನವೇ ಕಾರಣ.  ಇದೇ ಸ್ಥಿತಿ ಮುಂದುವರಿದರೆ ಕಾರ್ಖಾನೆಯ ಆಡಳಿತಾಧಿಕಾರಿಗಳ ವಿರುದ್ಧ ರೈತರೇ ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಧರಣಿಯಲ್ಲಿ ಪಾಲ್ಗೊಂಡಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ್‌ಬಾಬು, ಕಾರ್ಖಾನೆಯ ಉಳಿವಿಗಾಗಿ ಕೊಠಾರಿ ಷುಗರ್ಸ್‌ ಕಂಪನಿಗೇ ಕಾರ್ಖಾನೆ ನಿರ್ವಹಣೆ ಮುಂದುವರಿಸಬೇಕಿತ್ತು. ಇದನ್ನು ಮನಗಂಡೆ 30 ವರ್ಷಗಳ ಲೀಸ್‌ಗೆ ಕಾರ್ಖಾನೆ ವಹಿಸಿಕೊಡಲು ನಾಒಪ್ಪಿಗೆ ಪತ್ರ ನೀಡಿದ್ದೆವು ಎಂದರು.

ಆಡಳಿತ ಮಂಡಳಿ ಕಳೆದ ಸಾಲಿನ ಆಡಿಟ್ ವರದಿ ಹಾಗೂ ಸರ್ಕಾರ ಬಿಡುಗಡೆ ಮಾಡಿದ್ದ ರೂ.35 ಕೋಟಿಗಳ ಖರ್ಚುವೆಚ್ಚ ನೀಡಿಲ್ಲ. ಕಬ್ಬು ನುರಿಸುವಿಕೆ ಕಾರ್ಯ ಜೂನ್ ಬದಲಿಗೆ  ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿದ್ದೇ ನಷ್ಟಕ್ಕೆ ಕಾರಣ. ಇಳುವರಿಯೂ ಶೇ 9ರಿಂದ 5ಕ್ಕೆ ಇಳಿದಿದೆ. ಎಂದು ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಟೀಕಿಸಿದರು.

ತಾ.ಪಂ.ಉಪಾಧ್ಯಕ್ಷ ಶಾಮಣ್ಣ, ಸದಸ್ಯರಾದ ಶೈಲಜಾ ಗೋವಿಂದರಾಜು, ವಿಜಯ ಪ್ರಕಾಶ್, ಲಕ್ಷ್ಮಿ, ಯಶವಂತ್, ಪ.ಪಂ.ಅಧ್ಯಕ್ಷ ಎಸ್.ಸಿದ್ದೇಗೌಡ, ಜೆಡಿಎಸ್ ಅಧ್ಯಕ್ಷ ಧರ್ಮರಾಜು, ಕಾರ್ಯಾಧ್ಯಕ್ಷ ಮಲ್ಲೇಶ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.