ADVERTISEMENT

ಪಿಎಸ್‌ಎಸ್‌ಕೆ: ನಾಳೆಯಿಂದ ಕಬ್ಬು ಅರೆಯುವಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 5:25 IST
Last Updated 7 ಜುಲೈ 2012, 5:25 IST

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ (ಪಿಎಸ್‌ಎಸ್‌ಕೆ)ಯಲ್ಲಿ ಈ ಸಾಲಿನ ಕಬ್ಬು ಅರೆಯುವಿಕೆ ಕಾರ್ಯ ಜುಲೈ 8ರಂದು ಪ್ರಾರಂಭಗೊಳ್ಳಲಿದೆ ಎಂದು ಅಧ್ಯಕ್ಷ ನಾಗರಾಜಪ್ಪ ತಿಳಿಸಿದರು.

ಕಾರ್ಖಾನೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30 ಗಂಟೆಗೆ ಕಬ್ಬು ಅರೆಯುವಿಕೆ ಆರಂಭವಾಗಲಿದ್ದು, ಜನಪ್ರತಿನಿಧಿಗಳು, ಕಾರ್ಖಾನೆಯ ಮಾಜಿ ಅಧ್ಯಕ್ಷರುಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸುವರು. ಈ ಬಾರಿ 6 ಲಕ್ಷ ಟನ್ ಕಬ್ಬು ಅರೆಯುವಿಕೆ ಗುರಿಯಿಟ್ಟುಕೊಂಡಿದ್ದು ಪ್ರತಿನಿತ್ಯ ಸುಮಾರು 2.5 ಸಾವಿರ ಟನ್ ಕಬ್ಬು ಅರೆಯಲಾಗುವುದಲ್ಲದೆ ಸಕ್ಕರೆ ಇಳುವರಿ 9.5ರಷ್ಟು ತೆಗೆಯಲಾಗುವುದು ಎಂದರು.

ಕಳೆದ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಕೊಡಬೇಕಾದ ಬಾಕಿ 5 ಕೋಟಿ ರೂ.ಗಳನ್ನು ಸಕ್ಕರೆ ಮಾರಾಟದಿಂದ ಬಂದ ಹಣದಿಂದ ಪಾವತಿ ಮಾಡಲಾಗುವುದು. ಕಾರ್ಖಾನೆ ದಾಸ್ತಾನಿನಲ್ಲಿರುವ 1.5 ಲಕ್ಷ ಟನ್ ಸಕ್ಕರೆ ಮಾರಾಟ ಮಾಡಿದರೆ, ಸುಮಾರು 30 ಕೋಟಿ ಹಣ ದೊರೆಯಲಿದೆ. ಸಕ್ಕರೆ ಮಾರಾಟದ ಅನುಮತಿಗಾಗಿ ಕೇಂದ್ರ ಸರ್ಕಾರದ ಸಕ್ಕರೆ ನೀತಿಯ ವಿರುದ್ಧ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ರೈತರು ಯಾವ ಆತಂಕಪಡದೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಬೇಕು ಎಂದು ಮನವಿ ಮಾಡಿದರು.

ಕಬ್ಬು ಕಟಾವು ಮಾಡಲು ಸ್ಥಳೀಯ ಜನರ ಜತೆಗೆ ಬಳ್ಳಾರಿ ಜಿಲ್ಲೆಯಿಂದ ಹಂತ ಹಂತವಾಗಿ ಕೂಲಿ ಕಾರ್ಮಿಕರನ್ನು ಕರೆಸಿಕೊಳ್ಳಲಾಗುವುದು. ಪಿಎಸ್‌ಎಸ್‌ಕೆಗೆ ಸರ್ಕಾರದಿಂದ ಈ ಸಾಲಿಗೆ 15 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣಗೌಡ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಮಾಧ್ಯಮದವರು ಗಮನ ಸೆಳೆದಾಗ, ಈ ಬಾರಿಗೆ ಸರ್ಕಾರದಿಂದ ಕಾರ್ಖಾನೆಗೆ ಬಿಡುಗಾಸು ಕೂಡ ನೀಡಿಲ್ಲ. ಈಗಾಗಲೇ ಸುಮಾರು 10 ಪತ್ರಗಳನ್ನು ಮುಖ್ಯಮಂತ್ರಿಗಳಿಗೆ ಬರೆದು ಹಣ ಬಿಡುಗಡೆಗಾಗಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಆಲ್ಫಾನ್ಸ್ ರಾಜ, ಮುಖ್ಯ ಎಂಜಿನಿಯರ್ ಕೃಷ್ಣಸ್ವಾಮಿ, ಚೀಫ್ ಕೆಮಿಸ್ಟ್ ರಾಮಲಿಂಗಂ, ಕೇನ್ ಸೂಪರ್‌ವೈಸರ್ ಕೆ.ಆರ್.ನಂದೀಶ್ ಇದ್ದರು.

`ಶಾಲೆಗಾಗಿ ನಾವು ನೀವು~ ಯಶಸ್ವಿ
ಮಂಡ್ಯ: ತಾಲ್ಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ `ಶಾಲೆಗಾಗಿ ನಾವು-ನೀವು~ ಕಾರ್ಯಕ್ರಮವನ್ನು ಗುರುವಾರ ಆಚರಿಸಲಾಯಿತು.
ಶಿಕ್ಷಣ ಮಹತ್ವದ ಕುರಿತು ಜಾಗೃತಿ ಮೂಡಿಸಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರು, ಪೋಷಕರು ಮತ್ತು ಗ್ರಾಮದ ಮುಖಂಡರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.