ADVERTISEMENT

ಪೇಟೆ ರಸ್ತೆಗೆ ಸಿಗದ ವಿಸ್ತರಣೆ ಭಾಗ್ಯ !

ಕಿರಿದಾದ ರಸ್ತೆ, ಭುಗಿಲೇಳುವ ದೂಳು. ರಸ್ತೆಯಲ್ಲಿ ನಿಂತ ವಾಹನ: ಮದ್ದೂರು ಪೇಟೆ ರಸ್ತೆಯ ದುಸ್ಥಿತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 7:12 IST
Last Updated 21 ಜನವರಿ 2016, 7:12 IST
ಮದ್ದೂರಿನಲ್ಲಿ ಅಕ್ರಮವಾಗಿ ಅಂಗಡಿ ಸಾಮಗ್ರಿಗಳು ಪುಟ್‌ಪಾತ್‌ ಆವರಿಸಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ
ಮದ್ದೂರಿನಲ್ಲಿ ಅಕ್ರಮವಾಗಿ ಅಂಗಡಿ ಸಾಮಗ್ರಿಗಳು ಪುಟ್‌ಪಾತ್‌ ಆವರಿಸಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ   

ಮದ್ದೂರು: ಕಿರಿದಾದ ರಸ್ತೆ, ಭುಗಿಲೇಳುವ ದೂಳು. ರಸ್ತೆಯಲ್ಲಿಯೇ ನಿಂತ ವಾಹನಗಳು, ಪುಟ್‌ಪಾತ್‌ ಆವರಿಸಿದ ಅಂಗಡಿಗಳು.  ನಿರ್ಬಂಧದ ನಡುವೆಯೂ ಹೊಸದಾಗಿ ಅಕ್ರಮವಾಗಿ ತಲೆ ಎತ್ತುತ್ತಿರುವ ಪುಟ್‌ಪಾತ್‌ ಅಂಗಡಿಗಳು.

ಇದು ಪಟ್ಟಣದ ಹೃದಯ ಭಾಗದಲ್ಲಿರುವ  ಪೇಟೆ ರಸ್ತೆ ಉರುಫ್‌ ಪೇಟೆ ಬೀದಿಯ ಅವ್ಯವಸ್ಥೆಯ ನೋಟ. ಹಳೇ ಎಂಸಿ (ಮದ್ರಾಸ್‌ –ಕಣ್ಣನೂರು)ರಸ್ತೆ ಎಂದು ಕರೆಯಲ್ಪಡುವ ಈ ರಸ್ತೆ 50ವರ್ಷಗಳ ಹಿಂದೆ ಬೆಂಗಳೂರು–ಮೈಸೂರು ಹೆದ್ದಾರಿ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿತ್ತು. ಬಳಿಕ ವಾಹನ ದಟ್ಟಣೆ ಹೆಚ್ಚಾದ ಪರಿಣಾಮ ಬೈ ಪಾಸ್‌ ರಸ್ತೆಯಾದ ಮೇಲೆ ಪಟ್ಟಣದ ಪ್ರಮುಖ ಪೇಟೆ ಬೀದಿಯಾಗಿ ಮಾರ್ಪಟ್ಟಿತು. ಪ್ರಮುಖ ವಾಣಿಜ್ಯ ಕೇಂದ್ರವೂ ಆಯಿತು.

ಪಟ್ಟಣದ ಕೊಲ್ಲಿ ವೃತ್ತದಿಂದ ಟಿಬಿ ವೃತ್ತದವರೆಗೆ ವ್ಯಾಪಿಸಿರುವ ಈ ರಸ್ತೆ ಹೂವಿನ ವೃತ್ತದಿಂದ ಕೆಮ್ಮಣ್ಣುನಾಲೆ ವೃತ್ತದವರೆಗೆ ಅಕ್ಷರಶಃ ಕಿರಿದಾಗಿದೆ.  ಬೆಳಿಗ್ಗೆ ಸಂಜೆ ವೇಳೆಯಂತೂ ರಸ್ತೆ ಸಂಚಾರ ದಟ್ಟಣೆಗೊಂಡು ಇಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಓಡಾಡಲು ಹೆಣಗಾಡಬೇಕಾದ ಪರಿಸ್ಥಿತಿ ಒದಗಿದೆ.

ಈ ಕೆಲ ವರ್ಷಗಳ ಹಿಂದೆ ಇಲ್ಲಿದ್ದ ಹೂವು ತರಕಾರಿ ಅಂಗಡಿಗಳನ್ನು ತೆರವುಗೊಳಿಸಿ ಹಳೇ ಬಸ್‌ನಿಲ್ದಾಣಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಇದರ ಬೆನ್ನ ಹಿಂದೆಯೇ ಅಂದು ಜಿಲ್ಲಾಧಿಕಾರಿಯಾಗಿದ್ದ ಅಯ್ಯಪ್ಪ ಅವರು ಪೇಟೆ ರಸ್ತೆ ಅಗಲೀಕರಣಕ್ಕೆ ಆದೇಶಿಸಿ ಅದರಂತೆ 100ಅಡಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಆದಾದ ಕೆಲವು ದಿನಗಳಲ್ಲೇ ರಾಜಕೀಯ ಪ್ರಭಾವಿಗಳ ಒತ್ತಡದಿಂದ ಜಿಲ್ಲಾಧಿಕಾರಿಗಳು ವಗಾರ್ವಣೆಗೊಂಡು ವಿಸ್ತರಣೆ ಕಾರ್ಯ ನನೆಗುದಿಗೆ ಬಿದ್ದಿತು.

ಅಕ್ರಮ ಪೆಟ್ಟಿಯಂಗಡಿಗಳು:  ಇದೀಗ ಸದ್ದಿಲ್ಲದೇ ಪೇಟೆ ಬೀದಿಯಲ್ಲಿ ಅಕ್ರಮವಾಗಿ ನಂದಿನಿ ಪಾರ್ಲರ್‌ ನೆಪದಲ್ಲಿ ಪೆಟ್ಟಿಯಂಗಡಿಗಳು ತಲೆ ಎತ್ತುತ್ತಿವೆ. ಜತೆಗೆ ತರಕಾರಿ, ತಳ್ಳುವ ಗಾಡಿಗಳೇ ಅಂಗಡಿಗಳಾಗಿ ಪರಿವರ್ತನೆ ಹೊಂದುತ್ತಿವೆ.  ಪೇಟೆ ಬೀದಿಯ ಬಹುತೇಕ  ಫ್ಯಾನ್ಸಿಸ್ಟೋರ್‌, ದಿನಸಿ, ಕೋಳಿ ಅಂಗಡಿ ಮಾಲೀಕರು ಪುಟ್‌ಪಾತ್‌ ಅನ್ನು ಆವರಿಸಿದ್ದಾರೆ.

ಅಂಗಡಿಯಲ್ಲಿದ್ದ  ತಮ್ಮ ವಸ್ತುಗಳನ್ನು ಪುಟ್‌ಪಾತ್‌ನಲ್ಲಿಟ್ಟು ಮಾರಾಟ ಮಾಡುತ್ತಿದ್ದು,  ಪಾದಚಾರಿಗಳು ವಾಹನಗಳ ಆರ್ಭಟದ ನಡುವೆ ರಸ್ತೆಯಲ್ಲಿ  ಆತಂಕದಲ್ಲಿ ಓಡಾಡಬೇಕಾದ ಪರಿಸ್ಥಿತಿ ಒದಗಿದೆ. ಈ ಕುರಿತು ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಅಂಗಡಿ  ಮಾಲೀಕರಿಗೆ ವರದಾನವಾಗಿ ಪರಿಣಮಿಸಿದೆ.

ಪಟ್ಟಣ ಬೆಳೆದಂತೆ ಜನದಟ್ಟಣೆಯು ದಿನೇ ದಿನೇ ಏರಿಕೆಯಾಗುತ್ತಿದೆ ಆದರೆ ಪೇಟೆ ರಸ್ತೆ ಮಾತ್ರ ವಿಸ್ತರಣೆಗೊಂಡಿಲ್ಲ. ಮಳವಳ್ಳಿ, ನಾಗಮಂಗಲ, ಕೆ.ಆರ್‌.ಪೇಟೆರಸ್ತೆಗಳು ಈಗಾಗಲೇ ವಿಸ್ತರಣೆಗೊಂಡು ಜನರ ಸುಗಮ ಸಂಚಾರಕ್ಕೆ ದಕ್ಕಿವೆ. ಆದರೆ ಮದ್ದೂರು ಪಟ್ಟಣ ಪೇಟೆ ರಸ್ತೆಗಂತೂ ‘ವಿಸ್ತರಣೆ ಭಾಗ್ಯ’ ದೊರಕದಿರುವುದು ಚರ್ಚೆಗೆ ಗ್ರಾಸವಾಗಿದೆ.  ಕ್ಷೇತ್ರ ಶಾಸಕರು ಪಟ್ಟಣ ಪೇಟೆ ರಸ್ತೆಯ ಭವಿಷ್ಯದ ಸುಗಮ ಸಂಚಾರದ ದೃಷ್ಟಿಯಿಂದ ದಿಟ್ಟ ನಿರ್ಧಾರ ತಳೆಯಬೇಕಿದೆ. ಕಾಮಗಾರಿ ಪ್ರಾರಂಭವಾಗಲಿ ಎಂಬುದು ನಾಗರಿಕರ ಆಗ್ರಹ.

***
ಭವಿಷ್ಯದ ದೃಷ್ಟಿಯಿಂದ ಮದ್ದೂರು ಪಟ್ಟಣ ಪೇಟೆ ರಸ್ತೆ ವಿಸ್ತರಣೆಗೆ ಕಾರ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಪಕ್ಷಾತೀತವಾಗಿ ಮುಂದಾಗಬೇಕು.
-ಬ್ಯಾಡರಹಳ್ಳಿ ಶಿವಕುಮಾರ್‌,
ನಾಗರಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.