ADVERTISEMENT

ಬಡತನ ನಿವಾರಣೆಗೆ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 8:35 IST
Last Updated 3 ಜನವರಿ 2012, 8:35 IST

ಮಳವಳ್ಳಿ: ಶಿಕ್ಷಣ ಕೇವಲ ಜ್ಞಾನ, ಉದ್ಯೋಗಕ್ಕಾಗಿ ಮಾತ್ರ ಮೀಸಲಾಗಬಾರದು. ದೇಶದಲ್ಲಿರುವ ಬಡತನ, ಅಸಮಾನತೆಯಂತಹ ಪಿಡುಗುಗಳನ್ನು ಹೋಗಲಾಡಿಸಲು ನೆರವಾಗಬೇಕು ಎಂದು ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ.ಲಿಂಗರಾಜಗಾಂಧಿ ಹೇಳಿದರು.

ಪಟ್ಟಣದ ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ 2011-12ನೇ ಸಾಲಿನ ಬಿ.ಇಡಿ ತರಗತಿ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವೃತ್ತಿ ಮತ್ತು ತಾಂತ್ರಿಕ ಶಿಕ್ಷಣ ಕೇವಲ ಉದ್ಯೋಗಕ್ಕಾಗಿ ಮೀಸಲಾಗಿದ್ದು, ಸಾಮಾಜಿಕ ಅಸಮಾನತೆ ನಿವಾರಿಸುವ ನಿಟ್ಟಿನಲ್ಲಿ ಸಾಮಾಜಿಕ ಶಿಕ್ಷಣದ ಅಗತ್ಯ ಇದೆ ಎಂದು ಹೇಳಿದರು.

ದೇಶದ ಜನತೆಗೆ ಕೇವಲ ಪ್ರಾಥಮಿಕ ಶಿಕ್ಷಣ ದೊರೆತರೆ ಸಾಲದು. ಉನ್ನತ ಶಿಕ್ಷಣವೂ ದೊರೆತಾಗ ಮಾತ್ರ ದೇಶ ಅಭಿವೃದ್ಧಿ ಸಾಧ್ಯ. ಪ್ರಾಥಮಿಕ ಶಿಕ್ಷಣವನ್ನು ನೀಡಲು ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಆದರೆ, 120 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಶೇ 11ರಷ್ಟು ಜನರು ಮಾತ್ರ ಉನ್ನತ ಶಿಕ್ಷಣ ಪಡೆದಿದ್ದಾರೆ. ಶಿಕ್ಷಕರಾಗುವ ನೀವು ಕೇವಲ ಪಾಠ ಪ್ರವಚನಕ್ಕೆ ಮೀಸಲಾಗದೆ ಬಡತನ, ಮೂಢನಂಬಿಕೆ ನಿಯಂತ್ರಿಸುವಂತ ಕೆಲಸಕ್ಕೆ ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಭಗವಾನ್ ಬುದ್ಧ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ವೈ.ಎಸ್.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ಜಯರಾಜು, ಸಂಸ್ಥೆ ಖಜಾಂಚಿ ಚೇತನ್‌ಕುಮಾರ್, ರಾಮಂದೂರು ಗಣೇಶ್, ಶಂಭುಲಿಂಗೇಗೌಡ, ಶಿವಣ್ಣ, ಪ್ರಾಂಶುಪಾಲ ಎಸ್.ಲಿಂಗಯ್ಯ ಕುಮಾರಸ್ವಾಮಿ ಇದ್ದರು.

ಯೋಗ ತರಬೇತಿ
ಮೈಸೂರು: ಜೆಎಸ್‌ಎಸ್ ಆಯುರ್ವೇದ ಮತ್ತು ಮೊರಾರ್ಜಿ ದೇಸಾಯಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ವತಿಯಿಂದ ಯೋಗ ಸಾಧಕರ ತರಬೇತಿ ಮತ್ತು ಚಿಕಿತ್ಸಾ ಶಿಬಿರ ಹಾಗೂ ಯೋಗ ಶಿಬಿರವನ್ನು ಅಗ್ರಹಾರದಲ್ಲಿರುವ ಶಿವರಾತ್ರೀಶ್ವರ ರಾಜೇಂದ್ರ ಭವನದಲ್ಲಿ ಬೆಳಿಗ್ಗೆ 6ರಿಂದ 8ಗಂಟೆ ವರೆಗೆ ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಲಲಿತಾದ್ರಿಪುರದಲ್ಲಿರುವ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಅಥವಾ ದೂರವಾಣಿ 9886176690, 9481769609 ಸಂಪರ್ಕಿಸಲು ಪ್ರಕಟಣೆ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.