ADVERTISEMENT

ಬಾರದ ನೀರು: ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 6:50 IST
Last Updated 19 ಜುಲೈ 2013, 6:50 IST

ಶ್ರೀರಂಗಪಟ್ಟಣ: ತಾಲ್ಲೂಕಿನ ಅರಕೆರೆ ಹೋಬಳಿ ಹಾಗೂ ಮೈಸೂರು ತಾಲ್ಲೂಕು ಬನ್ನೂರಿಗೆ ಚಿಕ್ಕದೇವರಾಯ ಸಾಗರ (ಸಿಡಿಎಸ್) ನಾಲೆಯ ನೀರು ತಲುಪಿಲ್ಲದೆ ಇರುವುದರಿಂದ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಶೀಘ್ರ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ತಿ.ನರಸೀಪುರ ತಾಲ್ಲೂಕಿನ ಕಂಚನಹಳ್ಳಿ, ಬೇವಿನಹಳ್ಳಿ ಇತರ ಗ್ರಾಮಗಳ ರೈತರು ಕೆ.ಎಸ್. ನಂಜುಂಡೇಗೌಡ ನೇತೃತ್ವದಲ್ಲಿ ಗುರುವಾರ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮದ ವಿರುದ್ಧ ಘೋಷಣೆ ಕೂಗಿದರು.

ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಸಿಡಿಎಸ್ ನಾಲೆಗೆ ನೀರು ಬಿಟ್ಟು 14 ದಿನ ಕಳೆದಿದೆ. ಇನ್ನಾದರೂ ತಾಲ್ಲೂಕಿನ ಗಡಿಯನ್ನೇ ದಾಟಿಲ್ಲ.  ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ತಿ.ನರಸೀಪುರದವರು ಸಚಿವರಾಗಿದ್ದರೂ ಇತ್ತ ಗಮನ ಹರಿಸದೆ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. 5 ತಿಂಗಳು ನೀರಲ್ಲದೆ ನಾಲೆ ಬರಿದಾದ್ದರೂ ಸ್ವಚ್ಛತೆ ಮತ್ತು ದುರಸ್ತಿ ಕಾರ್ಯ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತರ ಜತೆ ದೂರವಾಣಿ ಮೂಲಕ ಮಾತನಾಡಿ ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಶಂಕರೇಗೌಡ, ಇನ್ನು 8 ದಿನಗಳ ಒಳಗೆ ಬನ್ನೂರು ಕೆರೆಗೆ ನೀರು ಬೀಳುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ ನಂತರ ರೈತರು ಪ್ರತಿಭಟನೆ ವಾಪಸ್ ಪಡೆದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆಂಪೇಗೌಡ, ರಾಮೇಗೌಡ, ನಾಗರಾಜು, ಕಿರಣ, ಮಲ್ಲೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.