ADVERTISEMENT

ಬಿಜೆಪಿ ಹಠಾವೋ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 9:30 IST
Last Updated 1 ಫೆಬ್ರುವರಿ 2011, 9:30 IST

ಶ್ರೀರಂಗಪಟ್ಟಣ: ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಲ್ಲಿ ಮುಳುಗಿದ್ದು ಜನವಿರೋಧಿ ಸರ್ಕಾರ ಪತನ ಆಗುವವರೆಗೆ ಕಾಂಗ್ರೆಸ್ ಜಿಲ್ಲೆಯಲ್ಲಿ ನಿರಂತರ ಹೋರಾಟ ನಡೆಸಲಿದೆ ಎಂದು ಮಾಜಿ ಸಂಸದ ಜಿ.ಮಾದೇಗೌಡ ಹೇಳಿದರು.

  ಸೋಮವಾರ ಪಟ್ಟಣದಿಂದ ಮಂಡ್ಯದ ವರೆಗೆ ನಡೆದ ಬಿಜೆಪಿ ಸರ್ಕಾರ ಹಠಾವೋ ಪಾದಯಾತ್ರೆಯಗೆ ಚಾಲನೆ ನೀಡಿ ಅವರು ಮಾತನಾಡಿದರು. ಬಿಜೆಪಿ ಸರ್ಕಾರ ರಣಹದ್ದಿನಂತೆ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಗಂಭೀರ ಆರೋಪಗಳಿವೆ. ಆದರೂ ಮುಖ್ಯಮಂತ್ರಿ ಯಡಿಯೂರಪ್ಪ ಕುರ್ಚಿ ಬಿಟ್ಟು ಇಳಿಯುತ್ತಿಲ್ಲ. ಅವರು ಇಳಿಯುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ. ಮಂಡ್ಯದ ಶಿವಪುರದಲ್ಲಿ ಜನ್ಮ ತಳೆದ ಕಾಂಗ್ರೆಸ್ ಬಿಜೆಪಿ ವಿರುದ್ಧ ಇಲ್ಲಿಂದಲೇ ಹೋರಾಟದ ಕಹಳೆ ಮೊಳಗಿಸುತ್ತಿದ್ದು ಯುವಕರು, ಮಹಿಳೆಯರು ಬೀದಿಗಿಳಿದು ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದಾರೆ. ಯಡಿಯೂರಪ್ಪ ತಕ್ಷಣ ರಾಜೀನಾಮೆ ನೀಡಿ ಗೌರವ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಬೆಂಗಳೂರು ವರೆಗೆ ಚಳವಳಿ ವ್ಯಾಪಿಸುತ್ತದೆ ಎಂದು ಎಚ್ಚರಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ಲಿಂಗರಾಜು ಮಾತನಾಡಿ, ‘ಸುಳ್ಳು, ಮೋಸಗಾರರಿಂದ ಕೂಡಿರುವ ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದೆ. ವ್ಯವಸ್ಥೆಯ ವಿರುದ್ಧ ಜನ ರೋಸಿ ಹೋಗಿದ್ದಾರೆ. ಕಾಂಗ್ರೆಸ್ ಪಕ್ಷ ಈಗ ಸಣ್ಣ ಹೋರಾಟ ಶುರು ಮಾಡಿದ್ದು, ಇದು ಮತ್ತಷ್ಟು ತೀವ್ರವಾಗಲಿದೆ’ ಎಂದರು.

ಕಾಂಗ್ರೆಸ್ ಮುಖಂಡ ಭಾಸ್ಕರ್ ಮಾತನಾಡಿದರು.  ಜಿಲ್ಲಾ ಕಾಂಗ್ರೆಸ್ ಯುವ ಅಧ್ಯಕ್ಷ ಚಿದಂಬರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎಂ.ಪುಟ್ಟೇಗೌಡ, ಎನ್.ಗಂಗಾಧರ್, ಟೌನ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಚ್.ಸಾಯಿಕುಮಾರ್, ರಾಮಸ್ವಾಮಿ, ಜೆ.ಸೋಮಶೇಖರ್, ಪಿ.ನಾಗೇಶ್, ಕೆಆರ್‌ಎಸ್ ರಾಮೇಗೌಡ, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ತಾ.ಪಂ. ಸದಸ್ಯರಾದ ಜಯರಾಂ, ಎಸ್.ಮಂಜುಳಾ ಇತರರು ಪಾದಯಾತ್ರೆಯಲ್ಲಿ ತೆರಳಿದರು.

ಮಂಡ್ಯ ವರದಿ: ಭ್ರಷ್ಟಾಚಾರದಲ್ಲಿ ತೊಡಗಿರುವ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಪದಚ್ಯುತಿಗೊಳಿಸಬೇಕು ಎಂದು ಆಗ್ರಹಿಸಿ ಶ್ರೀರಂಗಪಟ್ಟಣದಿಂದ ಪಾದಯಾತ್ರೆ ಬಂದ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿ ಮನವಿ ಸಲ್ಲಿಸಿದರು.ಪಾದಯಾತ್ರೆ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರಕ್ಕೆ ಧಕ್ಕೆಯಾಗಿದ್ದು, ಯಡಿಯೂರಪ್ಪ ಸರ್ಕಾರದ ವಿರುದ್ಧದ ಘೋಷಣೆಗಳಿದ್ದ ಭಿತ್ತಿಪತ್ರವನ್ನು ಪ್ರತಿಭಟನಾಕಾರರು ಹಿಡಿದಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.