ADVERTISEMENT

ಬಿಸಿಯೂಟದಲ್ಲಿ ಪಾಯಸದ ಸವಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 10:30 IST
Last Updated 6 ಡಿಸೆಂಬರ್ 2013, 10:30 IST

ಮಂಡ್ಯ: ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಇನ್ನು ಮೇಲೆ ಬಿಸಿಯೂಟ ಯೋಜನೆಯಡಿ ಅನ್ನ, ಬಾತ್‌್, ಚಿತ್ರಾನ್ನದೊಂದಿಗೆ ವಾರಕ್ಕೊಮ್ಮೆ ಚಪಾತಿ, ಪಾಯಸ, ಉಪ್ಪಿಟ್ಟು ಅಥವಾ ಪುರಿ ಊಟವೂ ಸಿಗಲಿದೆ.

ರಾಜ್ಯ ಸರ್ಕಾರವು ಈ ಕುರಿತು ಆದೇಶ ಹೊರಡಿಸಿದ್ದು, ಅಕ್ಕಿಯ ಜೊತೆಗೆ ಗೋದಿಯನ್ನೂ ಬಿಡುಗಡೆ ಮಾಡಲಾಗಿದೆ. ಅದರಿಂದ ಮೇಲಿನ ನಾಲ್ಕು ಪದಾರ್ಥಗಳಲ್ಲಿ ಒಂದನ್ನು ವಾರಕ್ಕೊಮ್ಮೆ ತಯಾರು ಮಾಡಿ ಬಡಿಸುವಂತೆ ತಿಳಿಸಿದೆ.

ಬಿಸಿಯೂಟ ಯೋಜನೆಗೆ ರಾಜ್ಯದಲ್ಲಿ ಅಕ್ಕಿ ಬಳಕೆ ಕಡಿಮೆಯಾಗುತ್ತಿರುವುದರ ಬಗ್ಗೆ ಕೇಂದ್ರ ಸರ್ಕಾರದ ಅನುಮೋದನಾ ಪ್ರಾಧಿಕಾರ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಯಾಕೆ ಕಡಿಮೆಯಾಗುತ್ತದೆ ಎನ್ನುವುದನ್ನು ಪರಿಶೀಲಿಸಿದಾಗ ಏಕತಾನತೆ ಅಡುಗೆಯಿಂದಾಗಿ ಮಕ್ಕಳು ಊಟ ಮಾಡುತ್ತಿಲ್ಲ ಎನ್ನುವುದು ಬೆಳಕಿಗೆ ಬಂದಿತ್ತು.

ಮಕ್ಕಳು ಕಡಿಮೆ ಊಟ ಮಾಡುವುದನ್ನು ತಪ್ಪಿಸಲು ಊಟದಲ್ಲಿ ವೈವಿಧ್ಯತೆ ತರಲು ಉದ್ದೇಶಿಸಿರುವ ಕೇಂದ್ರ ಸರ್ಕಾರವು ಇದೀಗ ಗೋದಿಯನ್ನು ಬಿಡುಗಡೆ ಮಾಡಿದೆ.

ಮಂಡ್ಯ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಿಗೆ ರಾಗಿಯನ್ನು ನೀಡಲು ಉದ್ದೇಶಿಸಲಾಗಿತ್ತು. ಅಗತ್ಯ ಪ್ರಮಾಣದಷ್ಟು ರಾಗಿ ದೊರೆಯದ್ದರಿಂದಾಗಿ ಈ ಜಿಲ್ಲೆಗಳಿಗೂ ಗೋದಿಯನ್ನೇ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿಲಾಗಿದೆ.

ಪಾತ್ರೆ ಪರಿಕರ ಬಳಕೆಗೆ ಅದಕ್ಕಾಗಿಯೇ ಬಿಡುಗಡೆಯಾಗಿರುವ ಅನುದಾನ, ಶಾಲಾ ಸಂಚಿತ ನಿಧಿ, ದಾನಿಗಳ ಸಹಕಾರ ಅಥವಾ ಅಕ್ಷರ ದಾಸೋಹ ಕಾರ್ಯಕ್ರಮದ ಸಂಚಿತ ಮೊತ್ತದಿಂದ ಪಡೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ 1,57,684 ಮಕ್ಕಳು ಬಿಸಿ ಯೂಟದ ಯೋಜನೆ ವ್ಯಾಪ್ತಿ ಬರುತ್ತಿದ್ದು, ಅವರಿಗಾಗಿ ಈಗಾಗಲೇ ಜಿಲ್ಲೆಗೆ 980 ಕ್ವಿಂಟಲ್‌ ಗೋಧಿ ಬಿಡುಗಡೆಯಾಗಿದೆ. ಒಂದರಿಂದ ಐದನೇ ತರಗತಿಯ ಮಕ್ಕಳಿಗೆ 100 ಗ್ರಾಂ ಹಾಗೂ ಆರರಿಂದ ಹತ್ತನೇ ತರಗತಿಯ ಮಕ್ಕಳಿಗೆ 150 ಗ್ರಾಂ ಗೋಧಿಯನ್ನು ಬಳಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಅದೇ ಆಧಾರದ ಮೇಲೆ ಗೋಧಿಯನ್ನು ಬಿಡುಗಡೆ ಮಾಡಲಾಗಿದೆ ಎನ್ನುತ್ತಾರೆ ಅಕ್ಷರ ದಾಸೋಹ ಅಧಿಕಾರಿ ಶಂಕರ್‌.

ಚಪಾತಿ, ಉಪ್ಪಿಟ್ಟು, ಪಾಯಸ ಹಾಗೂ ಪುರಿಯಲ್ಲಿ ಯಾವುದನ್ನು ಮಾಡಿಸಬೇಕು ಎಂಬ ನಿರ್ಧಾರವನ್ನು ಮಕ್ಕಳೊಂದಿಗೆ ಚರ್ಚಿಸಿ ಶಾಲಾ ಸುಧಾರಣಾ ಸಮಿತಿಯವರೇ ತೆಗೆದು ಕೊಳ್ಳಲಿದ್ದಾರೆ. ಆದರೆ, ವಾರದಲ್ಲಿ ಒಂದು ದಿನ ಮಾಡಲೇಬೇಕು. ಯಾವ ದಿನ ಮಾಡಲಾ ಗುತ್ತದೆ ಎಂಬುದನ್ನು ತಿಳಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಹೇಳಿದರು.

ಬಂದ್‌ ಬಿಸಿ: ಮಕ್ಕಳ ಪರದಾಟ
ಮಂಡ್ಯ: ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಬಿಸಿಯೂಟ ತಯಾರಿಸುವ ನೌಕರರು ಬೆಂಗಳೂರಿನಲ್ಲಿ ನಡೆದಿರುವ ಅನಿರ್ದಿಷ್ಟ ಮುಷ್ಕರಕ್ಕೆ ತೆರಳಿರುವುದರಿಂದ ಜಿಲ್ಲೆಯ ಅರ್ಧದಷ್ಟು ಶಾಲೆಗಳಲ್ಲಿ ಗುರುವಾರ ಬಿಸಿಯೂಟ ಬಂದ್‌ ಆಗಿದೆ.

ಮದ್ದೂರು ತಾಲ್ಲೂಕಿನ ಆಬಲವಾಡಿ, ಆಲೂರು, ಬೆಸಗರಹಳ್ಳಿ, ಕೊಪ್ಪ ಸೇರಿದಂತೆ ಶೇ 60 ರಷ್ಟು ಶಾಲೆಗಳಲ್ಲಿ ಬಿಸಿಯೂಟ ನೀಡಿಲ್ಲ. ಪಾಂಡವಪುರ, ಮಂಡ್ಯ, ನಾಗಮಂಗಲ ತಾಲ್ಲೂಕಿನಲ್ಲಿಯೂ ಇದರ ಬಿಸಿ ತಟ್ಟಿದೆ. ಜಿಲ್ಲೆಯಲ್ಲಿ 2,048 ಬಿಸಿಯೂಟ ತಯಾರಿಕೆ ಕೇಂದ್ರಗಳಿದ್ದು, ಅವುಗಳಲ್ಲಿ ಅರ್ಧದಷ್ಟು ಕಾರ್ಯ ನಿರ್ವಹಿಸಿಲ್ಲ. ಪರಿಣಾಮ 60 ಸಾವಿರಕ್ಕೂ ಹೆಚ್ಚು ಮಕ್ಕಳು ಊಟಕ್ಕಾಗಿ ಮನೆಗಳಿಗೆ ತೆರಳುವಂತಾಗಿದೆ.

ಬುಧವಾರದ ಬಂದ್‌ ಬಿಸಿಯಿಂದಾಗಿ ಕೆಲವು ಮಕ್ಕಳು ಟಿಫನ್‌ ಡಬ್ಬಿಯನ್ನು ತಂದಿದ್ದರೆ, ಇನ್ನೂ ಕೆಲವು ಮಕ್ಕಳು ಮನೆಗಳಿಗೆ ತೆರಳಿ ಊಟ ಮಾಡಿ ಬಂದಿದ್ದಾರೆ.

ಪಾಂಡವಪುರದಲ್ಲಿ ಶೇ 40 ರಷ್ಟು, ಮದ್ದೂರು ತಾಲ್ಲೂಕಿನಲ್ಲಿ ಶೇ 50 ರಷ್ಟು ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯಾಗಿಲ್ಲ. ಕೆಲವು ಶಾಲೆಗಳಲ್ಲಿ ನಾಲ್ವರು ಅಡುಗೆಯವರಿದ್ದರೆ ಇಬ್ಬರು ಪ್ರತಿಭಟನೆಗೆ ತೆರಳಿದ್ದು, ಇನ್ನಿಬ್ಬರು ಅಡುಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆಂದು ಹಿರಿಯ ಅಧಿಕಾರಿಗಳು ತಿಳಿಸಿದ್ದು, ನಾಳೆಯಿಂದ ಸರಿ ಹೋಗಲಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಶಂಕರ್‌್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT