ADVERTISEMENT

ಬೇಬಿಬೆಟ್ಟ: 42 ಜೋಡಿಗೆ ಕಂಕಣಭಾಗ್ಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 6:10 IST
Last Updated 25 ಫೆಬ್ರುವರಿ 2012, 6:10 IST

ಪಾಂಡವಪುರ: ತಾಲ್ಲೂಕಿನ ಬೇಬಿ ಬೆಟ್ಟದಲ್ಲಿ ಶುಕ್ರವಾರ 42 ಜೋಡಿಗಳು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ದನಗಳ ಭಾರಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಸರಳ ವಿವಾಹ ಮಹೋತ್ಸವದಲ್ಲಿ ರಾಮಯೋಗಿಶ್ವರ ಮಠದ ಸದಾಶಿವ ಸ್ವಾಮೀಜಿ, ವೈದ್ಯನಾಥಪುರದ ಕದಂಬ ಜಂಗಮ ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನೂತನ ವಧು-ವರರು ಹಸೆಮಣೆ ಏರಿದರು.

ಮಂಡ್ಯ, ಮೈಸೂರು ಹಾಗೂ ಹಾಸನ ಜಿಲ್ಲೆಗಳಿಂದ ಬೆಳಿಗ್ಗೆ 9 ಗಂಟೆಗೆ ಆಗಮಿಸಿದ ನೂತನ ವರರು ಬಿಳಿ ಅಂಗಿ, ಕಚ್ಚೆ, ಮೈಸೂರು ಪೇಟ ಧರಿಸಿ ಹಣೆಗೆ ಬಾಸಿಂಗ ಕಟ್ಟಿಕೊಂಡರೆ, ವಧುಗಳು ಹಸಿರು ಸೀರೆ, ಬಿಳಿ ಕುಪ್ಪಸ ಧರಿಸಿ ಬಾಸಿಂಗ ಕಟ್ಟಿಕೊಂಡು ಮದುವೆಗೆ ಸಿದ್ಧರಾದರು. ಮಾಜಿ ಸಚಿವ ಎಂ.ಶಿವಣ್ಣ, ಶಾಸಕ ಸಿ.ಎಸ್.ಪುಟ್ಟರಾಜು ಹಾಗೂ ನಾಗಮ್ಮ ಪುಟ್ಟರಾಜು ವರನಿಗೆ ತಾಳಿ ವಿತರಿಸಿ ಅಕ್ಷತೆ ನೀಡಿದರು.

ವಧು-ವರರು ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡರು. ಪುರೋಹಿತರು ಮಾಂಗಲ್ಯಧಾರಣೆಯ ಮಂತ್ರ ಉಪದೇಶಿಸಿದ ಮೇಲೆ ಬೆಳಿಗ್ಗೆ 10.13ರಲ್ಲಿ ಮೇಷ ಲಗ್ನದ ಶುಭ ಮಹೂರ್ತದಲ್ಲಿ ಮಾಂಗಲ್ಯ ಧಾರಣೆ ನಡೆಯಿತು. ಸೇರಿದ್ದ ಸಾವಿರಾರು ಜನರು ದಂಪತಿಗಳಿಗೆ  ಶುಭ ಹಾರೈಸಿ ಸಾಮೂಹಿಕ ವಿವಾಹಕ್ಕೆ ಸಾಕ್ಷಿಯಾದರು.
 
ನಂತರ ನಡೆದ ಸಮಾರಂಭದಲ್ಲಿ ನೂತನ ದಂಪತಿಗಳಿಗೆ ಆಶೀರ್ವಚನ ನೀಡಿದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಸಾಲ ಮಾಡಿ ದುಬಾರಿ ಮದುವೆಗೆ ಬದಲು ಸರಳವಾಗಿ ವಿವಾಹವಾಗಬೇಕು ಎಂದರು. ಇದೇ ಸಂದರ್ಭ ಉದ್ಯಮಿಗಳಾದ ರವೀಶ್‌ಗೌಡ, ಶ್ರೀನಿವಾಸ, ಹರ್ಷ, ದಯಾ, ಲಕ್ಷ್ಮೀನಾರಾಯಣ ನಿರ್ಮಾಪಕ ಬ್ರಹ್ಮಿ ಅವರನ್ನು ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.