ADVERTISEMENT

ಬೇಸಿಗೆ ಬೆಳೆಗೆ ನೀರು ಕೊಡುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 8:43 IST
Last Updated 24 ಅಕ್ಟೋಬರ್ 2017, 8:43 IST

ಶ್ರೀರಂಗಪಟ್ಟಣ: ‘ಕೆಆರ್‌ಎಸ್‌ ಜಲಾಶಯದಲ್ಲಿ 114 ಅಡಿಗಳಷ್ಟು ನೀರು ಲಭ್ಯ ಇರುವುದರಿಂದ ಅಚ್ಚುಕಟ್ಟು ಪ್ರದೇಶದಲ್ಲಿ ಬೇಸಿಗೆ ಬೆಳೆಗೆ ನೀರು ಕೊಡುವ ಪ್ರಯತ್ನ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ತಿಳಿಸಿದರು. ಪಟ್ಟಣದಲ್ಲಿ ಸೋಮವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

‘ಮುಂಗಾರು ಹಂಗಾಮಿನಲ್ಲಿ ಉಳಿದಿರುವ ಕಬ್ಬು ಬೆಳೆಗೆ ಇನ್ನೂ ಎರಡು ಅಥವಾ ಮೂರು ಕಟ್ಟು ನೀರು ಹರಿಸಲಾಗುತ್ತದೆ. ಕುಡಿಯಲು ಅಗತ್ಯ ಇರುವಷ್ಟು ಇಟ್ಟುಕೊಂಡು ಬೇಸಿಗೆ ಬೆಳೆಗೂ ನೀರು ಕೊಡಬಹುದೆ ಎಂಬುದರ ಬಗ್ಗೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದರು.

‘ಕೆಆರ್‌ಎಸ್‌ನಲ್ಲಿ ಹೆಚ್ಚು ನೀರು ಉಳಿದರೆ ಬೇಸಿಗೆ ಹಂಗಾಮಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸುತ್ತೇವೆ. 10 ಅಥವಾ 20 ದಿನಗಳ ಕ್ರಮದಲ್ಲಿ ಕಟ್ಟು ನೀರು ಕೊಡುವ ಕುರಿತು ಮುಂದಿನ ದಿನಗಳಲ್ಲಿ ನಿರ್ಣಯ ಮಾಡುತ್ತೇವೆ’ ಎಂದರು.

ADVERTISEMENT

‘ಕಳೆದ ವರ್ಷ ಬೆಳೆ ನಷ್ಟ ಅನುಭವಿಸಿರುವ ತಾಲ್ಲೂಕಿನ ಮೂರು ಹೋಬಳಿಗಳ ರೈತರಿಗೆ ಬೆಳೆ ಪರಿಹಾರ ಸಿಕ್ಕಿಲ್ಲ ಎಂಬ ದೂರುಗಳಿವೆ. ಇದರ ಪರಿಶೀಲನೆ ನಡೆಯುತ್ತಿದೆ. ಮುಂಗಾರು ಹಂಗಾಮಿನಲ್ಲಿ ಕೃಷಿ ಮಾಡದೇ ಖಾಲಿ ಉಳಿದಿರುವ ಜಮೀನಿಗೆ ಪರಿಹಾರ ನೀಡುವ ಕುರಿತು ಇನ್ನೂ ಚಿಂತನೆ ನಡೆಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯಿಸಿದರು.

ಶಾಸಕರಾದ ಕೆ.ಎಸ್‌. ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ, ಸಂಸದ ಸಿ.ಎಸ್‌. ಪುಟ್ಟರಾಜು ಮಾತನಾಡಿದರು. ಜಿಲ್ಲಾಧಿಕಾರಿ ಎನ್‌. ಮಂಜುಶ್ರೀ, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌ ಶಿವಶಂಕರ್‌, ಅಧೀಕ್ಷಕ ಎಂಜಿನಿಯರ್‌ ವಿಜಯಕುಮಾರ್‌, ಇಇ ಬಸವರಾಜೇಗೌಡ, ಜಿ.ಪಂ. ಸಿಇಒ ಬಿ. ಶರತ್‌, ಉಪ ವಿಭಾಗಾಧಿಕಾರಿ ಆರ್‌. ಯಶೋದಾ, ತಹಶೀಲ್ದಾರ್‌ ಕೆ.ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.