ADVERTISEMENT

ಬೋಗಾದಿ ಗ್ರಾ.ಪಂ. ಅಧ್ಯಕ್ಷರಾಗಿ ರಮೇಶ್

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 9:20 IST
Last Updated 7 ಜೂನ್ 2011, 9:20 IST

ನಾಗಮಂಗಲ: ಬೋಗಾದಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಂತರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಬೋಗಾದಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಜೆ ಡಿ ಎಸ್ ನ ಬೋಗಾದಿ ಕ್ಷೇತ್ರದ ಸದಸ್ಯ ರಮೇಶ್ ಆಯ್ಕೆಯಾದರು.

ರಮೇಶ್ 13-3 ಮತಗಳಿಂದ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗಿಡುವಿನಹೊಸಹಳ್ಳಿಯ ಮಹದೇವ್ ಅವರನ್ನು ಪರಾಭವಗೊಳಿಸಿದರು.  ಒಟ್ಟು 18 ಮಂದಿ ಸದಸ್ಯರಿರುವ ಈ ಗ್ರಾಮ ಪಂಚಾಯ್ತಿಯಲ್ಲಿ ಜೆ ಡಿ ಎಸ್ ಬೆಂಬಲಿತರು 12 ಹಾಗೂ ಕಾಂಗ್ರೆಸ್ ಸದಸ್ಯರು 6 ಮಂದಿ ಇದ್ದರು. ಆದರೆ ಇಂದು ಬೆಳಗ್ಗೆ ಕಾಂಗ್ರೆಸ್ ಪಾಳಯದ 3 ಮಂದಿ ಜೆ ಡಿ ಎಸ್ ಗೆ ಬೆಂಬಲ ಸೂಚಿಸಿದ ಮೇರೆಗೆ ಜೆ.ಡಿ ಎಸ್ ಬಲ 15 ಕ್ಕೇರಿತು. ಜೆ.ಡಿ ಎಸ್ ನ ರಮೇಶ್ 13 ಮತಪಡೆದರು ಅವರ ಪ್ರತಿಸ್ಫರ್ಧಿ ಮಹದೇವ್ 3 ಮತ ಪಡೆದರು. 2 ಮತ ತಿರಸ್ಕೃ ತಗೊಂಡವು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶ್ ಮಾತನಾಡಿ ಬೋಗಾದಿ ಗ್ರಾಮ ಪಂಚಾಯ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಪ್ರಥಮವಾಗಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಸರ್ಕಾರದ ಅನುದಾನವನ್ನು ಎಲ್ಲಾ ಸದಸ್ಯರ ವಿಶ್ವಾಸ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿಗಾಗಿ ವಿನಿಯೋಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನನ್ನ ಗುರಿ ಎಂಬುದಾಗಿ ತಿಳಿಸಿದರು. ಕಾಂಗ್ರೆಸ್ ನ 3 ಮಂದಿ ಸದಸ್ಯರು ಜೆ.ಡಿ. ಎಸ್ ಸೇರಿರುವುದು ಈ ಭಾಗದಲ್ಲಿ ಜೆ ಡಿ ಎಸ್ ಪಕ್ಷಕ್ಕೆ ಹೆಚ್ಚು ಬಲ ಸಿಕ್ಕಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಾಳಯದಿಂದ ಜೆ ಡಿ ಎಸ್ ತೆಕ್ಕೆಗೆ: ಬೋಗಾದಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಪ್ರಭಾವಿ ಮುಖಂಡನೆಂದು ಗುರುತಿಸಲ್ಪಟ್ಟಿದ್ದ ಕಳ್ಳಿಗುಂಡಿ ಕ್ಷೇತ್ರದ ಕೆ.ಎನ್.ಸೋಮಶೇಖರ್ ಮತ್ತು ಸುಖಧರೆ ಕ್ಷೇತ್ರದ ಧನಲಕ್ಷ್ಮಿ ಹಾಗೂ ಬೊಮ್ಮನಾಯಕನಹಳ್ಳಿಯ ಎಂ.ಟಿ.ಆರ್.ನಾಗಣ್ಣ ಕಾಂಗ್ರೆಸ್ ತೊರೆದು ಜೆ.ಡಿ.ಎಸ್ ಪಕ್ಷಕ್ಕೆ ಸೇರಿರುವುದಾಗಿ ಅಧಿಕೃತವಾಗಿ ತಿಳಿಸಿದರು. ಪಕ್ಷಾಂತರಕ್ಕೆ ಕಾರಣ ನೀಡುವಲ್ಲಿ ಹಿಂದೆ ಸರಿದರು.

ಬೋಗಾದಿ ಕ್ಷೇತ್ರದ ಜೆ ಡಿ ಎಸ್ ನ ತಾ.ಪಂ ಸದಸ್ಯ ದೇವರಾಜು, ಮನ್‌ಮುಲ್ ನಿರ್ದೇಶಕ ಬೆಟ್ಟಸ್ವಾಮಿಗೌಡ, ಎ.ಪಿ.ಎಂ.ಸಿ ಸದಸ್ಯ ಮೈಕೋ ಕೃಷ್ಣಪ್ಪ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ನಾಗೇಗೌಡ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.