ADVERTISEMENT

ಭೂಮಿ ಯೋಜನೆಯಡಿಯಲ್ಲಿ ಮದ್ದೂರು ಪ್ರಥಮ

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 4:58 IST
Last Updated 10 ಜನವರಿ 2014, 4:58 IST

ಮದ್ದೂರು:- ಇಲ್ಲಿನ  ತಾಲ್ಲೂಕು ಕಚೇರಿಯು ಭೂಮಿ ಯೋಜನೆಯಡಿಯಲ್ಲಿ ಲಿ ಒಟ್ಟು 4779 ಪ್ರಕರಣಗಳನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಇತ್ಯರ್ಥಗೊಳಿಸುವ  ಮೂಲಕ ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕಂದಾಯ ಇಲಾಖೆಯು ರಾಜ್ಯದ ಎಲ್ಲಾ ತಾಲ್ಲೂಕು ಕಚೇರಿಗಳಿಗೆ ಭೂಮಿ ಯೋಜನೆಯಡಿಯಲ್ಲಿ ಬಾಕಿ ಉಳಿದ ಪ್ರಕರಣಗಳ ಇತ್ಯರ್ಥಕ್ಕಾಗಿ ಒಂದು ತಿಂಗಳ ಅವಕಾಶ ನೀಡಿತ್ತು. ಅಲ್ಲದೇ ಅತೀ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ರಾಜ್ಯದ 10 ತಾಲ್ಲೂಕು ಕಚೇರಿಗಳಿಗೆ ಅಭಿನಂದನಾ ಪತ್ರ ನೀಡುವುದಾಗಿ ಘೋಷಿಸಿತ್ತು.

ಇದನ್ನು ಸವಾಲಾಗಿ ಸ್ವೀಕರಿಸಿದ ತಾಲ್ಲೂಕು ತಹಶೀಲ್ದಾರ್ ಸಿ.ಎನ್.ಜಗದೀಶ್,  ಕಳೆದ ಡಿಸೆಂಬರ್ ತಿಂಗಳಿನಲ್ಲಿ ತಮ್ಮ  ಕಚೇರಿ ಸಿಬ್ಬಂದಿಯೊಂದಿಗೆ  ಹಗಲಿರಳು ಶ್ರಮಿಸಿದರು. ಇದರ ಪರಿಣಾಮ ತಾಲ್ಲೂಕಿನಲ್ಲಿ ಬಾಕಿ ಉಳಿದಿದ್ದ 3448 ಪೋಡಿ, 314 ತಿರುವಳಿಕೆ ಚೀಟಿ ವಿತರಣೆ, 232 ಖಾತೆ ಬದಲಾವಣೆ, 6 ಪಹಣಿ ವರ್ಗಾವಣೆ, 149 ನ್ಯಾಯಾಲಯ ಆದೇಶಗಳ ಇತ್ಯರ್ಥ ಸೇರಿದಂತೆ 630 ಹಕ್ಕು ಮತ್ತು ಋಣ ಪ್ರಕರಣಗಳು ಸೇರಿದಂತೆ  ಒಟ್ಟು 4779 ಪ್ರಕರಣಗಳು ಇತ್ಯರ್ಥಗೊಂಡವು. 

’ಈ ಸಾಧನೆ ನನಗೆ ತುಂಬಾ ಖುಷಿ ತಂದಿದೆ. ನನ್ನ ಸಹೋದ್ಯೋಗಿ ಮಿತ್ರರು ರಜಾದಿನಗಳು ಸೇರಿದಂತೆ ಹಗಲಿರುಳು ನನ್ನೊಡನೆ ಟೊಂಕಕಟ್ಟಿ ನಿಂತು ದುಡಿದ ಪರಿಣಾಮ ಇಷ್ಟೊಂದು ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಾಯಿತು ಎಂದು ತಹಶೀಲ್ದಾರ್ ಸಿ.ಎನ್. ಜಗದೀಶ್ ‘ಪ್ರಜಾವಾಣಿ’ ಯೊಂದಿಗೆ ತಮ್ಮ ಹರ್ಷ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.