ADVERTISEMENT

ಮಂಡ್ಯ ಜಿಲ್ಲೆ ಕಡೆಗಣಿಸಿದ ಮುಖ್ಯಮಂತ್ರಿ

ದುದ್ದ: ಜೆಡಿಎಸ್‌ ಚುನಾವಣಾ ಪ್ರಚಾರಕ್ಕೆ ಚಾಲನೆ, ಸಿ.ಎಸ್‌.ಪುಟ್ಟರಾಜು ಆರೋಪ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 10:05 IST
Last Updated 10 ಏಪ್ರಿಲ್ 2018, 10:05 IST

ಕೆರಗೋಡು: ಜಿಲ್ಲೆಯ ರೈತರು ಬೇಸಾಯಕ್ಕೆ ನೀರಿಗಾಗಿ ಹಾತೊರೆಯುತ್ತಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯಲ್ಲಿ ಸಾಕಷ್ಟು ನೀರು ಲಭ್ಯವಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಜಮೀನುಗಳಿಗೆ ನೀರು ಹರಿಸದೇ ಜಿಲ್ಲೆಯನ್ನು ಕಡೆಗಣಿಸಿದ್ದಾರೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ವಾಗ್ದಾಳಿ ನಡೆಸಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದುದ್ದ ಹೋಬಳಿಯಲ್ಲಿ ಜೆಡಿಎಸ್ ಪ್ರಚಾರಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ನಾನು ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ಈ ವ್ಯಾಪ್ತಿಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಿ, ಸುತ್ತೂರು ಹಾಗೂ ಚುಂಚನಗಿರಿ ಶ್ರೀಗಳಿಂದ ಬಾಗಿನ ಅರ್ಪಿಸುವ ಮೂಲಕ ರೈತರ ನೆರವಿಗೆ ಧಾವಿಸಿದ್ದೆ. ಆದರೆ ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಕೆರೆ - ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ಸರ್ಕಾರ ಹಾಗೂ ಚುನಾಯಿತ ಶಾಸಕರು ಅಸಕ್ತಿ ವಹಿಸಲಿಲ್ಲ ಎಂದು ದೂರಿದರು.

ADVERTISEMENT

ಕೃಷಿಯನ್ನೇ ನಂಬಿರುವ ಅನ್ನದಾತ ಸಂಕಷ್ಟದಲ್ಲಿದ್ದಾನೆ. ಅನ್ನದಾತನ ಆತ್ಮಹತ್ಯೆ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ಪರವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದಾರೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲಮನ್ನಾ, ನೇಕಾರರ ಸಾಲಮನ್ನಾ ಸೇರಿದಂತೆ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದಾಗಿ ಜೆಡಿಎಸ್ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ ಎಂದರು.

ಜಿಲ್ಲೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪರ ಅಲೆ ಸೃಷ್ಟಿಯಾಗಿದೆ. ಜತೆಗೆ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಹಕಾರ ಸಂಘಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಚುನಾಯಿತರಾಗಿದ್ದು ಅಧಿಕಾರ ನಮ್ಮ ಪಕ್ಷದ ವಶದಲ್ಲಿದೆ. ನನ್ನ ಅಧಿಕಾರಾವಧಿಯಲ್ಲಿ ದುದ್ದ ವ್ಯಾಪ್ತಿಯ ವಿ.ಸಿ.ಫಾರಂ ಹಾಗೂ ಜಿ.ಮಲ್ಲಿಗೆರೆ ಗ್ರಾಮಗಳಲ್ಲಿ ವಿದ್ಯುತ್ ಸಬ್ ಸ್ಟೇಷನ್ ಆರಂಭಿಸಿ ರೈತರು, ನ ಸಾಮಾನ್ಯರ ಹಿತ ಕಾಪಾಡಲಾಗಿದೆ ಎಂದರು.

ಕ್ಷೇತ್ರದಲ್ಲಿ ಕೆಲವರು ರಾಜಕೀಯ ಊಹಾಪೋಹಗಳನ್ನು ಸೃಷ್ಟಿಸುತ್ತಿದ್ದಾರೆ. ಯಾವುದೇ ಊಹಾಪೋಹಗಳಿಗೆ ಅವಕಾಶಬೇಡ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ನನ್ನ ಗೆಲುವು ಶತಸಿದ್ಧ ಎಂದು ಪ್ರತಿಪಾದಿಸಿದರು.

ಪ್ರತಿ ಗ್ರಾಮದ ಮುಖಂಡರು ಹಾಗೂ ಕಾರ್ಯಕರ್ತರು ತಾವೇ ಅಭ್ಯರ್ಥಿಗಳೆಂದು ತಿಳಿದು. ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಕೈ ಬಲಪಡಿಸಲು ಪಕ್ಷದ ಕಾರ್ಯಕ್ರಮಗಳನ್ನು ಮನವರಿಕೆ ಮಾಡಿ ಮತಯಾಚಿಸಬೇಕು ಎಂದರು.

ಮಾದೇಗೌಡ ಜೆಡಿಎಸ್‌ಗೆ ಸೇರ್ಪಡೆ: ಇದೇ ಸಂದರ್ಭದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಹೊಳಲು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡ ಹೆಚ್.ಮಲ್ಲಿಗೆರೆ ಗ್ರಾಮದ ಮಾದೇಗೌಡ ಸಂಸದ ಸಿ.ಎಸ್.ಪುಟ್ಟರಾಜು ಸಾರಥ್ಯದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. ವಿಧಾನ ಪರಿಷತ್ ಸದಸ್ಯ ಕೆ. ಟಿ. ಶ್ರೀಕಂಠೇಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಮುಖಂಡರಾದ ಮಲ್ಲಿಗೆರೆ ಮಾದಪ್ಪ, ಹೆಚ್. ಎಲ್. ಶಿವಣ್ಣ, ಅಂಬುಜಮ್ಮ, ಸಿದ್ದರಾಮೇಗೌಡ, ತಾ.ಪಂ ಸದಸ್ಯೆ ಕವಿತಾ ಜ್ಞಾನಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.