ADVERTISEMENT

ಮತಗಟ್ಟೆ ಮೇಲೆ ನಿಗಾವಹಿಸಿ

ತರಬೇತಿ ಕಾರ್ಯಕ್ರಮದಲ್ಲಿ ಸೂಕ್ಷ್ಮ ವೀಕ್ಷಕರಿಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಮೇ 2018, 13:00 IST
Last Updated 7 ಮೇ 2018, 13:00 IST

ಮಂಡ್ಯ: ‘ಚುನಾವಣೆಗೆ ನೇಮಕವಾಗಿ ರುವ ಸೂಕ್ಷ್ಮ ವೀಕ್ಷಕರು ಮತಗಟ್ಟೆಯ ಸಂಪೂರ್ಣ ಉಸ್ತುವಾರಿ ವಹಿಸಬೇಕು. ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವೀಕ್ಷಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿ ಮತಗಟ್ಟೆಗೆ ಸೂಕ್ಷ್ಮ ವೀಕ್ಷಕರ ನೇಮಕವಾಗುತ್ತಿದ್ದು, ಅಲ್ಲಿ ಮತದಾನ ಚಟುವಟಿಕೆಗಳಿಗೆ ಪೂರಕ ಅವಶ್ಯ ಸಿದ್ಧತೆಗಳ ಬಗ್ಗೆ ನಿಗಾ ವಹಿಸಬೇಕು. ಮತಗಟ್ಟೆಗಳಲ್ಲಿ ಸರಿಯಾದ ವೇಳೆಗೆ ಮತದಾನ ಪ್ರಕ್ರಿಯೆ ಆರಂಭ, ಅಭ್ಯರ್ಥಿ ಪರ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ, ಅಭ್ಯರ್ಥಿ ಪರ ಏಜೆಂಟರು ಚುನಾವಣಾ ಆಯೋಗದ ನಿರ್ದೇಶನ ಪಾಲಿಸುವ ಬಗ್ಗೆ ಪರಿಶೀಲಿಸಬೇಕು. ಆಯೋಗ ಸೂಚಿಸಿರುವ ದಾಖಲೆಗಳನ್ನು ಮತದಾರರಿಂದ ಪರಿಶೀಲಿಸಲಾಗುತ್ತಿದೆಯೇ ಎಂಬ ಬಗ್ಗೆ ನೋಡಿಕೊಳ್ಳಬೇಕು. ಏಜೆಂಟರಿಂದ ಮತದಾನ ಪ್ರಕ್ರಿಯೆ ಅಥವಾ ಮತಗಟ್ಟೆ ಸಿಬ್ಬಂದಿ ಬಗ್ಗೆ ದೂರುಗಳು ಬಂದರೆ ತಕ್ಷಣ ಬಗೆಹರಿಸಬೇಕು. ಯಾವುದೇ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಚುನಾವಣಾ ವೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಮತದಾನ ಪೂರ್ಣಗೊಂಡ ಸಮಯ, ಹಕ್ಕು ಚಲಾಯಿಸಿರುವ ಮತದಾರರ ಸಂಖ್ಯೆ,  ಶೇಕಡಾವಾರು ಮತದಾನ ಪ್ರಮಾಣ ಇನ್ನಿತರ ಮಾಹಿತಿಗಳನ್ನು ನಮೂದು ಮಾಡಬೇಕು. ಅವಧಿ ಪೂರ್ಣಗೊಂಡ ಬಳಿಕ ವಿದ್ಯುನ್ಮಾನ ಮತಯಂತ್ರಗಳನ್ನು ಸೂಕ್ತವಾಗಿ ಸೀಲ್ ಮಾಡುವುದು, ಏಜೆಂಟರು ನಿಗದಿತ ನಮೂನೆಯಲ್ಲಿ ಸಹಿ, ಯಾವ ವೇಳೆಯಲ್ಲಿ ಮತಗಟ್ಟೆಯಿಂದ ಸಿಬ್ಬಂದಿ ನಿರ್ಗಮಿಸಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಬೇಕು’ ಎಂದರು.

ಮಳವಳ್ಳಿ ಮತ್ತು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರಾದ ಮನೋಜ್‌ಕುಮಾರ್, ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಎಸ್.ಬಿ ಪಟೇಲ್, ಮದ್ದೂರು ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಸೂರಜ್ ಭಾನ್ ಜೈಮನ್, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.