ADVERTISEMENT

‘ಮಹಿಳಾ ವಿವಿ ಕೇಂದ್ರಕ್ಕೆ ಶೀಘ್ರ ಸುಸಜ್ಜಿತ ಕಟ್ಟಡ’

ಕ್ರೀಡಾ–ಸಾಂಸ್ಕೃತಿಕ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 12 ಮೇ 2018, 7:36 IST
Last Updated 12 ಮೇ 2018, 7:36 IST

ಮಂಡ್ಯ: ‘ಅಕ್ಕಮಹಾದೇವಿ ಮಹಿಳಾ ವಿವಿ ಹೊರಾವರಣ ಸ್ನಾತಕೋತ್ತರ ಕೇಂದ್ರ ಇದೀಗ ತಾನೆ ಸಸಿಯಾಗಿ ಬೆಳೆಯುತ್ತಿದ್ದು, ಮುಂದೆ ಇದೊಂದು ಹೆಮ್ಮರವಾಗಿ ಬೆಳೆಯುತ್ತದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಬಿಹಾ ಹೇಳಿದರು.

ಬಿ.ಹೊಸೂರು ಬಳಲಿಯ ಹೊರಾವರಣ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಗುರುವಾರ ನಡೆದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭದಲ್ಲಿ ಜ್ಞಾನಕಾವೇರಿ ವಾರ್ಷಿಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಕಾಲೇಜು ಕಟ್ಟಡ ನಿರ್ಮಾಣಕ್ಕೆ ಬಿ.ಹೊಸೂರು ಬಳಿ 18 ಎಕರೆ ಜಾಗ ಗುರುತಿಸಲಾಗಿದೆ. ₹ 10 ಕೋಟಿ ಅನುದಾನ ಮಂಜೂರಾಗಿದ್ದು, ನೀಲನಕ್ಷೆ ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಳ್ಳಲಿದೆ. ರಾಜ್ಯ ಸರ್ಕಾರದ ನಿರ್ದೇಶನದಂತೆ ಈಗಾಗಲೇ ರಾಜ್ಯದ 13 ಮಹಿಳಾ ವಿಶ್ವವಿದ್ಯಾನಿಲಯ ಕಾಲೇಜುಗಳು ಅಕ್ಕಮಹಾದೇವಿ ವಿವಿಯೊಂದಿಗೆ ಸಂಯೋಜನೆಯಾಗಿವೆ. ಉಳಿದ 28 ಮಹಿಳಾ ಕಾಲೇಜುಗಳು ಅಕ್ಕಮಹಾದೇವಿ ಮಹಿಳಾ ವಿವಿಯೊಂದಿಗೆ ಸಂಯೋಜನೆ ಕಾರ್ಯ ಆಗಬೇಕಿದ್ದು ಈ ಕಾರ್ಯ ಪ್ರಗತಿಯಲ್ಲಿದೆ’ ಎಂದರು.

ADVERTISEMENT

ಸ್ಪಂದನ ಸಂಸ್ಥೆ ಅಧ್ಯಕ್ಷೆ ನಾಗರೇವಕ್ಕ ಮಾತನಾಡಿ ‘ಮಹಿಳೆ ಸಬಲೆ, ಎಲ್ಲ ಕ್ಷೇತ್ರಗಳಲ್ಲೂ ತೊಡಗಿಕೊಂಡು ಪುರುಷರಿಗೆ ಸಮಾನವಾಗಿದ್ದಾಳೆ. ಆದರೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ಎರಡನೇ ದರ್ಜೆಯಲ್ಲಿ ನೋಡುತ್ತಿರುವುದು ಸರಿಯಲ್ಲ. ಈಚೆಗೆ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಅತ್ಯಾಚಾರಿಗಳಿಗೆ ಯಾವುದೇ ಥರದ ಶಿಕ್ಷೆಯಾಗುತ್ತಿಲ್ಲ. ಇದು ಬೇಸರದ ಸಂಗತಿ’ ಎಂದರು.

ರ‍್ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಕೇಂದ್ರದ ವಿಶೇಷಾಧಿಕಾರಿ (ಶೈಕ್ಷಣಿಕ) ವಿಭಾಗದ ಪ್ರೊ.ವಿಜಯಶ್ರೀ ಸಬರದ, ವಿಶೇಷಾಧಿಕಾರಿ (ಆಡಳಿತ) ಪ್ರೊ.ಎನ್.ಚಂದ್ರಪ್ಪ, ಉಪನ್ಯಾಸಕರಾದ ಅಭಿಲಾಷ್, ಗೀತಾಮಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.