ADVERTISEMENT

`ಮಾದೇಗೌಡರು ಮಂಡ್ಯ ಪರಿಸರ ಕಾಪಾಡಲಿ'

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:45 IST
Last Updated 20 ಡಿಸೆಂಬರ್ 2012, 6:45 IST

ಸೋಮವಾರಪೇಟೆ: ಕೊಡಗಿನ ಜನರು ಪರಿಸರ ಪ್ರೇಮಿಗಳು. ಪರಿಸರ ರಕ್ಷಣೆಯ ಬಗ್ಗೆ ಮಂಡ್ಯದ ಮಾದೇಗೌಡರಿಂದ ಕಲಿಯುವ ಅವಶ್ಯಕತೆ ನಮಗಿಲ್ಲ. ಮೊದಲು ಮಂಡ್ಯದಲ್ಲಿ ಮರಗಿಡಗಳನ್ನು ರಕ್ಷಿಸಿ ಪರಿಸರ ಕಾಪಾಡುವ ಕೆಲಸವನ್ನು ಅವರು ಮಾಡಲಿ ಎಂದು ಮಡಿಕೇರಿ ಕ್ಷೇತ್ರ ಬಿಜೆಪಿ ವಕ್ತಾರ ಕೆ.ಜಿ.ಸುರೇಶ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡಗಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಮಂಡ್ಯದ ಜಿ.ಮಾದೇಗೌಡ ವಿರೋಧ ವ್ಯಕ್ತಪಡಿಸಿರುವುದು ಖಂಡನೀಯ ಎಂದರು.
ಪರಿಸರಕ್ಕೆ ಮಾರಕವಾಗುವ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶವಿಲ್ಲ. ಪರಿಸರಸ್ನೇಹಿ ಉದ್ದಿಮೆಗಳು ಆರಂಭವಾದರೆ, ಇಲ್ಲಿನ ಜನರಿಗೆ ಉದ್ಯೋಗಾವಕಾಶಗಳು ಸಿಗುತ್ತವೆ. ಇಲ್ಲಿಯ ಯುವಕರು ನಗರ ಪ್ರದೇಶಗಳಿಗೆ ವಲಸೆ ಹೋಗುವುದು ತಪ್ಪುತ್ತದೆ ಎಂದರು. 

ಜೆಡಿಎಸ್ ಜಿಲ್ಲಾಧ್ಯಕ್ಷರಾದ ವಿ.ಪಿ.ಶಶಿಧರ್, ಸಚಿವ ಅಪ್ಪಚ್ಚು ರಂಜನ್ ಅವರ ವೈಯಕ್ತಿಕ ತೇಜೋವಧೆ ಮಾಡುತ್ತಿದ್ದಾರೆ. ಚುನಾವಣೆಯ ಸೋಲಿನ ಭಯದಿಂದ ಇಂತಹ  ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಜೆಡಿಎಸ್ ಅಪ್ಪಮಕ್ಕಳ ಪಕ್ಷವೆಂಬುದು ರಾಜ್ಯದ ಜನತೆಗೆ ಗೊತ್ತು, ಇಂತಹ ಆರೋಪವನ್ನು ಜಿಲ್ಲೆಯ ಬಿಜೆಪಿಗೆ ತಳಕು ಹಾಕುವ ನೈತಿಕತೆ ಶಶಿಧರ್‌ಗಿಲ್ಲ ಎಂದರು.

ಜೆಡಿಎಸ್ ಒಂದು ನಾಟಕ ಕಂಪೆನಿ, ಇವರ ಬಯಲಾಟಕ್ಕೆ ಜನರು ಮಾರುಹೋಗುವುದಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಕೆ.ಲೋಕೇಶ್ ವ್ಯಂಗ್ಯವಾಡಿದರು.ಗೋಷ್ಠಿಯಲ್ಲಿ ಪಕ್ಷದ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಎ.ಎಸ್.ಮಲ್ಲೇಶ್, ಮುಖಂಡರಾದ ಮೆಣಸ ಮಹಾದೇವಪ್ಪ, ಮೋಹನ್‌ದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.