ADVERTISEMENT

ಮೈಸೂರು: ಯೋಗ ದಸರಾ 5ರಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 5:32 IST
Last Updated 16 ಸೆಪ್ಟೆಂಬರ್ 2013, 5:32 IST

ಮೈಸೂರು: ಅಕ್ಟೋಬರ್ 5ರಿಂದ 12ರವರೆಗೆ ಯೋಗ ದಸರಾ ಮಹೋತ್ಸವವನ್ನು ರಾಮಸ್ವಾಮಿ ಸರ್ಕಲ್ ಬಳಿಯ ಭರತಾಂಜಲಿ ಯೋಗ ಮತ್ತು ನಾಟ್ಯ ಶಾಲೆಯಲ್ಲಿ ಆಯೋಜಿಸಲಾಗಿದೆ ಎಂದು ಮೈಸೂರು ಯೋಗ ಶಾಲೆ ಕಾರ್ಯದರ್ಶಿ ವಿ. ಸೋಮಶೇಖರ್ ತಿಳಿಸಿದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2007ರ ಯೋಗ ದಸರಾ ಮಾತ್ರ ಸಾರ್ವಜನಿಕರನ್ನು ಆಕರ್ಷಿಸಿತ್ತು. ನಂತರ ಆರೋಗ್ಯ ಹಾಗೂ ಆಯುಷ್ ಇಲಾಖೆಗಳು ನಡೆಸಿದ ಯೋಗ ದಸರಾಗಳು ಅವ್ಯವಸ್ಥೆಯ ಕೂಪವಾಗಿದ್ದವು. ಯಾವುದೇ ನಿರ್ದಿಷ್ಟ ರೂಪುರೇಷೆ ಇಲ್ಲದೆ ಒಂದೇ ವೇದಿಕೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಯಾವುದೇ ಯೋಗ ಕಾರ್ಯಕ್ರಮಗಳು ನಡೆದಿಲ್ಲ ಎಂದು ಆರೋಪಿಸಿದರು.

ಮೈಸೂರಿನಲ್ಲಿ ಯೋಗ ಸಂಬಂಧ ಹಲವಾರು ಸಂಘ–ಸಂಸ್ಥೆಗಳು ಸಕ್ರಿಯವಾಗಿವೆ. ಆದರೆ, ಯೋಗ ದಸರಾ ಉಪಸಮಿತಿಯು ಅವುಗಳನ್ನು ಒಟ್ಟುಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿಲ್ಲ. ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಮಾತ್ರ ಎಲ್ಲರೂ ಭಾಗವಹಿಸಬೇಕೆಂದು ಸಮಿತಿ ಬಯಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಯೋಗಶಾಲೆಯು 30 ಯೋಗ ಕೇಂದ್ರಗಳ ಸಹಕಾರದೊಂದಿಗೆ ಈ ಬಾರಿ ‘ಯೋಗ ದಸರಾ–2013 ಸಾಂಸ್ಕೃತಿಕ ನಮನ’ ಕಾರ್ಯಕ್ರಮವನ್ನು ವಿಭಿನ್ನವಾಗಿ ನಡೆಸಲಿದ್ದು, ಇದರಲ್ಲಿ ರಾಷ್ಟ್ರಮಟ್ಟದ ಯೋಗಪಟುಗಳು ಪಾಲ್ಗೊಳ್ಳುವರು. ಪ್ರತಿಭಾನ್ವಿತ ಯೋಗ ಕಲಾವಿದರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಹಾಗೂ ಯೋಗಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಲಾಗುವುದು ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.