ADVERTISEMENT

ಮೋಡಿ ಮಾಡಿದ `ಹನ್ನೆರಡು' ಕಾರ್ಯಕ್ರಮ!

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 10:19 IST
Last Updated 13 ಡಿಸೆಂಬರ್ 2012, 10:19 IST

ಮಂಡ್ಯ: ಅದೊಂದು ವಿಶಿಷ್ಟ ಕಾರ್ಯಕ್ರಮ. ಅದರ ಹೆಸರೇ `ಹನ್ನೆರಡು'..!

ಹನ್ನೆರಡು ಕೃತಿಗಳು, ಹನ್ನೆರಡು ಮಹಿಳೆಯರಿಂದ ಬಿಡುಗಡೆ! ಜತೆಗೆ, ಪ್ರತಿಭಾಂಜಲಿ ಅಕಾಡೆಮಿಯ ಹನ್ನೆರಡು ಮಂದಿ ಪ್ರತಿಭಾನ್ವಿತರಿಂದ `ಸುಗಮ ಸಂಗೀತ' ಗಾಯನದ ಹಿಮ್ಮೇಳ. ಹನ್ನೆರಡು ಹಣತೆಗಳನ್ನೂ ಬೆಳಗಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಗಣ್ಯರಿಂದಲೂ ಹನ್ನೆರಡು ನಿಮಿಷವೇ ಭಾಷಣ..!

ಅದು, 12-12-12 ಸಂಖ್ಯೆ ಸೃಷ್ಟಿಸಿದ ಸಿಂಡ್ರೊಮ್. ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿಯು ನಗರದ ಗಾಂಧಿ ಭವನದಲ್ಲಿ ಬುಧವಾರ ಸಂಘಟಿಸಿದ್ದ, ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ಹಲವರು ಸಾಕ್ಷಿಯಾದರು.

`ದಾರಿ ಯಾವುದಯ್ಯ ವೈಕುಂಠಕ್ಕೆ..' ಗೀತ ಗಾಯನದ ಮಧ್ಯೆಯೇ, ಸಮಯ ಮಧ್ಯಾಹ್ನ 12 ಗಂಟೆ 12 ನಿಮಿಷ ಆಗುತ್ತಿದ್ದಂತೆ, ಅತಿಥಿಗಳು ಡಾ.ಪ್ರದೀಪ್‌ಕುಮಾರ್ ಹೆಬ್ರಿ ಅವರ ಡಂಗುರ, ಮಲ್ಲಾರ ಸೇರಿದಂತೆ ಹನ್ನೆರಡು ಪುಸ್ತಕಗಳನ್ನು ಬಿಡುಗಡೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಮಾರಂಭ ಉದ್ಘಾಟಿಸಿದ ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾ ಅಪ್ಪಾಜಿ ಮಾತನಾಡಿ, ಇದೊಂದು ವಿಶಿಷ್ಟ ಹಾಗೂ ಅಪರೂಪದ ಕಾರ್ಯಕ್ರಮ ಎಂದು ಬಣ್ಣಿಸಿದರು. ವೃತ್ತಿಯಲ್ಲಿ ವೈದ್ಯರಾಗಿರುವ ಹೆಬ್ರಿ ಅವರು ಕವಿಯಾಗಿ, ಲೇಖಕರಾಗಿಯೂ ಗಮನ ಸೆಳೆದಿದ್ದಾರೆ. ಮಕ್ಕಳ ಜ್ಞಾನ ಹೆಚ್ಚಿಸುವ ಪುಸ್ತಕಗಳನ್ನೂ ಬರೆದಿದ್ದಾರೆ. ಗೆಜ್ಜೆ ಕಟ್ಟಿದರೆ, ಯಕ್ಷಗಾನವನ್ನೂ ಮಾಡಬಲ್ಲರು. ಹಾಗೇ, ಸಂಗೀತ, ಶಿಲ್ಪ, ಯಕ್ಷಗಾನ, ವಾಸ್ತು ಶಿಲ್ಪಕಲೆ ಬಗೆಗೂ ಅಧಿಕಾರಯುತವಾಗಿ ಮಾತನಾಡಬಲ್ಲರು ಎಂದು ಹೇಳಿದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಬಿ.ಜಯಪ್ರಕಾಶ್‌ಗೌಡ ಮಾತನಾಡಿ, `ಸಾಹಿತ್ಯ, ಸಂಗೀತ, ನೃತ್ಯಕ್ಕೆ ಮನಸ್ಸು ಅರಳಿಸುವ, ಚಿಂತನೆಗೆ ಒಡ್ಡುವ ಶಕ್ತಿ ಇದೆ. ಇಂಥ ಪ್ರಕಾರಗಳ ಬಗ್ಗೆ ನಾವು ಆಸಕ್ತಿ ಬೆಳಸಿಕೊಳ್ಳಬೇಕು' ಎಂದರು.
ಪ್ರತಿಭಾಂಜಲಿ ಸುಗಮ ಸಂಗೀತಾ ಅಕಾಡೆಮಿಯ ಅಧ್ಯಕ್ಷ ಡೇವಿಡ್, ಶರಣ ಸಾಹಿತ್ಯ ಪರಿಷತ್ತು ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.