ADVERTISEMENT

ಯಡಿಯೂರಪ್ಪ ಗುಣಗಾನ ಮಾಡಿದ ಪುಟ್ಟಣ್ಣಯ್ಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 8:05 IST
Last Updated 22 ಏಪ್ರಿಲ್ 2013, 8:05 IST

ಪಾಂಡವಪುರ: ಅಧಿಕಾರದ ಲಾಲಸೆಗಾಗಿ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ಯಡಿಯೂರಪ್ಪನವರ ಸಖ್ಯ ಬೆಳೆಸಿ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿಯಾದರು. ಈ ಚುನಾವಣೆಯಲ್ಲಿ ಯಡಿಯೂರಪ್ಪನವರು ಸ್ವಯಂಪ್ರೇರಿತರಾಗಿ ರೈತ ಮುಖಂಡರಿಗೆ ಬೆಂಬಲ ನೀಡಿದ್ದಾರೆಯೇ ಹೊರತು ಅಧಿಕಾರದ ಆಸೆಗಾಗಿ ಅಲ್ಲ ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.

ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಶನಿವಾರ ನಡೆದ ಸರ್ವೋದಯ ಕರ್ನಾಟಕ ಪಕ್ಷದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಅವರು ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಪಕ್ಷವೇ ನೇರ ಹೊಣೆ ಎಂದು ಆರೋಪಿಸಿದ ಅವರು, ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಟನ್ ಕಬ್ಬಿಗೆ ಕೇವಲ ರೂ. 811 ನೀಡಿದರು.

ಪಿಎಸ್‌ಎಸ್‌ಕೆಯನ್ನು ಖಾಸಗಿ ಕಂಪನಿಯೊಂದಕ್ಕೆ ವಹಿಸಿ ಕಾರ್ಖಾನೆ ಮುಚ್ಚುವಂತೆ ಮಾಡಿದರು. ಯಡಿಯೂರಪ್ಪ ಪಿಎಸ್‌ಎಸ್‌ಕೆಗೆ ರೂ. 57 ಕೋಟಿ ಬಿಡುಗಡೆ ಮಾಡಿ ಪುನಶ್ಚೇತನಗೊಳಿಸುವುದರ ಮೂಲಕ ರೈತರ ಸಂಕಷ್ಟಕ್ಕೆ ನೆರವಾದರು ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಚುನಾವಣೆಯಲ್ಲಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾಸುರಕ್ಷಾ ಯೋಜನೆಗಳನ್ನು ಸರ್ಕಾರದ ಆದೇಶದಂತೆ ಮನೆಮನೆಗಳಿಗೆ ತಲುಪಿಸಲು 17 ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ.  ಈ ಅಧಿಕಾರಿಗಳಿಗೆ ಮೈಸೂರಿನ ಕಿಂಗ್ಸ್‌ಕೋರ್ಟ್ ಹೋಟೆಲ್‌ನಲ್ಲಿ ಬಾಡೂಟ, ಮದ್ಯ, ಮೋಜು ಮಸ್ತಿ ವ್ಯವಸ್ಥೆ ಮಾಡಿ ತಮ್ಮ ಪರವಾಗಿ ರಹಸ್ಯವಾಗಿ ಪ್ರಚಾರ ನಡೆಸುವಂತೆ ಸೂಚಿಸಿದ್ದಾರೆ. ಅಲ್ಲದೇ ಕೆಲವು ಅಂಗನವಾಡಿ, ಆಶಾ ಕಾರ್ಯಕರ್ತರ ಮೂಲಕವೂ ಪ್ರಚಾರ ನಡೆಸುತ್ತಿದ್ದಾರೆ.

ಇದೇ ರೀತಿ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅವರ ನೇತೃತ್ವದಲ್ಲಿ ಮಂಡ್ಯದ ಗುರುರಾಜ ಕಾಂಟಿನೆಂಟಲ್ ಹೋಟೆಲ್‌ನಲ್ಲಿ ಕೆಲ ಶಿಕ್ಷಕರಿಗೆ ಮತ್ತು ನೌಕರರಿಗೆ ಬಾಡು, ಬ್ರಾಂದಿ ಪಾರ್ಟಿ ಏರ್ಪಡಿಸಿದ್ದರು ಏಂದು ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಕೆ.ಪುಟ್ಟೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಡೆಲ್ಲಿಬೋರೇಗೌಡ, ನಾಗೇಗೌಡ, ರಮೇಶ್, ಮುಖಂಡರಾದ ಬಸವೇಗೌಡ, ಸ್ವಾಮೀಗೌಡ, ದಸಂಸ ಮುಖಂಡರಾದ ಎನ್.ಕೆ.ಜಯರಾಮ್, ಅಂತನಹಳ್ಳಿ ಬಸವರಾಜು, ರೈತ ಮುಖಂಡ ಹೊಸಹಳ್ಳಿ ಬಿ.ಜಯರಾಮ್ ಇದ್ದರು. 

ಪ್ರಚಾರ ಸಮಿತಿಗೆ ನೇಮಕ
ಮಂಡ್ಯ:
ನಾಗಮಂಗಲ ತಾಲ್ಲೂಕು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ವಕೀಲ ಟಿ.ಕೆ. ರಾಮೇಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತಿಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.