ADVERTISEMENT

ಯದುಗಿರಿಯ ಕವಿ ಎಂದೇ ಹೆಸರಾಗಿದ್ದ ಪುತಿನ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:05 IST
Last Updated 15 ಅಕ್ಟೋಬರ್ 2012, 5:05 IST

ಪಾಂಡವಪುರ: ಯದುಗಿರಿಯ ಕವಿ ಎಂದೇ ಹೆಸರಾಗಿದ್ದ ಪುತಿನ ಅವರು  ಧಾರ್ಮಿಕ ನೆಲೆಯಾಗಿದ್ದ ಮೇಲುಕೋಟೆಯನ್ನು ಸಾಂಸ್ಕೃತಿಕ ನೆಲೆಗೆ ಏರಿಸಿದರು ಎಂದು ಕವಿ ಎಚ್.ಎಸ್.ವೆಂಕಟೇಶಮೂರ್ತಿ ಹೇಳಿದರು.

ತಾಲ್ಲೂಕಿನ ಮೇಲುಕೋಟೆಯಲ್ಲಿ ಮಂಡ್ಯದ ಅನುಭವ ಮಂಟಪ ಸಾಂಸ್ಕೃತಿಕ ಪರಿಷತ್ತು ಮತ್ತು ಬೆಂಗಳೂರಿನ ಪುತಿನ ಪ್ರತಿಷ್ಠಾನ ಸಹಯೋಗದಲ್ಲಿ ಪುತಿನ ಅವರ 15ನೇ ವರ್ಷದ ಪುಣ್ಯ ದಿನದ ಅಂಗವಾಗಿ ಶನಿವಾರ ನಡೆದ ಪುತಿನ ಅವರ ಸಾಹಿತ್ಯ ಸಿಂಹಾವಲೋಕನ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೇಲುಕೋಟೆಯ ಬೆಟ್ಟ, ತೊರೆ, ಕಣಿವೆ, ಕಾಡು, ಗುಡಿಗಳು ಮೊದಲು ಪುತಿನ ಅವರ ಕಾವ್ಯವಸ್ತುವಾಗಿದ್ದವು. ಹಳೆಯದು ಹೊಸದಾದರೆ ಮಾತ್ರ ಅದಕ್ಕೊಂದು ಮೌಲ್ಯ ಬರುತ್ತದೆ. ಇಲ್ಲದಿದ್ದರೆ ನಿಂತನೀರಾಗುತ್ತದೆ ಎಂದು ಹೇಳುತ್ತಿದ್ದರು. ಲೌಕಿಕ ಮತ್ತು ಅಲೌಕಿಕಗಳೆರಡರ ಅರಿವು ಅವರಿಗಿತ್ತು.
 
ಒಂದು ಹಕ್ಕಿ ನೆಲವನ್ನು ಸ್ಪರ್ಶಿಸಿ ಮತ್ತೆ ಆಕಾಶದೆಡೆಗೆ ಹಾರುವ ರೀತಿಯಲ್ಲಿ ಅವರ ಚಿಂತನಾಲಹರಿ ಹರಿಯುತ್ತಿತ್ತು ಎಂದು ತಿಳಿಸಿದರು.  ಪುತಿನ ಅವರ ಅಹಲ್ಯೆ ಕುರಿತು ಸಾಹಿತಿ ಡಾ.ಅರ್ಜುನಪುರಿ ಅಪ್ಪಾಜಿಗೌಡ, ಪುತಿನ ಅವರ ಗದ್ಯಪ್ರಬಂಧಗಳು ಕುರಿತು ಕನ್ನಡ ಪ್ರಾಧ್ಯಾಪಕ ಡಾ.ಎಸ್.ಎಲ್.ಶ್ರೀನಿವಾಸಮೂರ್ತಿ ಮಾತನಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.