ADVERTISEMENT

ರಂಜಾನ್‌: ಸಮೋಸ ಭರ್ಜರಿ ಮಾರಾಟ

ಒಂದು ಗಂಟೆ ಅವಧಿಯಲ್ಲಿ ರಾಶಿ ರಾಶಿ ಮಾರಾಟ, ಚಿಕನ್‌, ಮಟನ್‌ ಸಮೋಸ ವಿಶೇಷ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:13 IST
Last Updated 15 ಜೂನ್ 2018, 13:13 IST

ಮಂಡ್ಯ: ರಂಜಾನ್‌ ಅಂಗವಾಗಿ ಉಪವಾಸ ನಿರತ ಮುಸ್ಲಿಮರು ಸೂರ್ಯ ಮುಳುಗುತ್ತಲೇ ಬಿಸಿಬಿಸಿಯಾದ ಸಮೋಸಗಳಿಗೆ ಮಾರು ಹೋಗುತ್ತಿದ್ದಾರೆ. ತುಂತುರು ಮಳೆಯ ಜೊತೆಗೆ ಚುಮುಚುಮು ಚಳಿಯೂ ಇರುವ ಕಾರಣ ಮಸೀದಿ ಸಮೀಪ ರಾಶಿರಾಶಿ ಸಮೋಸ ಭರ್ಜರಿಯಾಗಿ ಮಾರಾಟವಾಗುತ್ತಿವೆ.

ರೋಜಾ ಬಿಟ್ಟ ನಂತರ ಮುಸ್ಲಿಮರು ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುತ್ತಾರೆ. ರಂಜಾನ್‌ ಸಮಯದಲ್ಲಿ ಘಮಘಮಿಸುವ ಸಮೋಸ ಸೇವನೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ನಗರದ ಎಲ್ಲಾ ಬೇಕರಿಗಳಲ್ಲಿ ದಿನಕ್ಕೆ ಅಪಾರ ಸಮೋಸಗಳು ಮಾರಾಟವಾಗುತ್ತಿವೆ. ಇಷ್ಟೇ ಅಲ್ಲದೆ ಮಸೀದಿಗಳ ಸಮೀಪದಲ್ಲಿ ವ್ಯಾಪಾರಿಗಳು ಸಾಲುಸಾಲಾಗಿ ಸ್ಟಾಲ್‌ ತೆರೆದಿದ್ದು ಸ್ಥಳದಲ್ಲೇ ಬಿಸಿಬಿಸಿ ಸಮೋಸ ಬೇಯಿಸಿ ಕೊಡುತ್ತಿದ್ದಾರೆ. ಈದ್ಗಾ ಮೈದಾನದ ಸಮೀಪದಲ್ಲಿ ಹಲವು ಮಾರಾಟ ಕೇಂದ್ರಗಳು ತಲೆ ಎತ್ತಿದ್ದು ಸಂಜೆ 7 ಗಂಟೆಯಿಂದ 8 ಗಂಟೆಯೊಳಗೆ ಸಾವಿರಾರು ಸಮೋಸ ಖಾಲಿಯಾಗುತ್ತಿವೆ.

‘ಬೆಳಿಗ್ಗೆಯಿಂದಲೂ ಈರುಳ್ಳಿ ಹೆಚ್ಚಿ, ಮೈದಾ ಹಿಟ್ಟು ಮಾಡಿಕೊಂಡು ಇಟ್ಟುಕೊಳ್ಳುತ್ತೇವೆ. ಸಂಜೆ 6 ಗಂಟೆಯಾಗುತ್ತಲೇ ಸಮೋಸ ಕರಿಯಲು ಆರಂಭಿಸುತ್ತೇವೆ. ಮಸೀದಿಯಲ್ಲಿ ನಮಾಜ್‌ ಸಲ್ಲಿಸಿದ ನಂತರ ಜನರು ಬರುತ್ತಾರೆ. ತಕ್ಷಣ ಅವರಿಗೆ ಬಿಸಿಬಿಸಿಯಾಗಿ ಮಾಡಿಕೊಡುತ್ತವೆ. ಗಂಟೆಯಲ್ಲಿ ಎರಡು ಸಾವಿರ ಸಮೋಸ ಖಾಲಿಯಾಗುತ್ತವೆ. ಮಹಿಳೆಯರು ಮನೆಗೆ ಕಟ್ಟಿಸಿಕೊಂಡು ಹೋಗುತ್ತಾರೆ. ಬೆಳಿಗ್ಗೆಯಿಂದ ಏನನ್ನೂ ತಿನ್ನದ ಜನರು ಉಪವಾಸ ಮುಗಿದ ಕೂಡಲೇ ರುಚಿಯಾದ ಸಮೋಸ ತಿನ್ನುತ್ತಾರೆ’ ಎಂದು ಈದ್ಗಾ ಮೈದಾನದ ಬಳಿ ಸಮೋಸ ಮಾಡಿ, ಮಾರಾಟ ಮಾಡುವ ಅಕ್ಬರ್‌ ಪಾಷಾ ಹೇಳಿದರು.

ADVERTISEMENT

ಮಾಂಸಾಹಾರಿ ಸಮೋಸ: ಗುತ್ತಲು ಬಡಾವಣೆ, ಸಾದತ್‌ ನಗರದ ಮಸೀದಿ ಸಮೀಪ ಮಾಂಸಾಹಾರ ಸಮೋಸಗಳಿಗೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಚಿಕನ್‌ ಸಮೋಸ, ಮಟನ್‌ ಸಮೋಸ, ಚಿಕನ್‌ ಖೀಮಾ ಸಮೋಸ ಮಾಡಿ ಮಾರಾಟ ಮಾಡಲಾಗುತ್ತಿದೆ. ಕಳೆದ ಒಂದು ವಾರದಿಂದ ತುಂತುರು ಮಳೆ ಸುರಿದು ಚಳಿಯ ವಾತಾವರಣ ಸೃಷ್ಟಿಯಾಗಿದ್ದು ಮಾಂಸಾಹಾರ ಸಮೋಸಕ್ಕೆ ಜನರು ಮುಗಿ ಬೀಳುತ್ತಿದ್ದಾರೆ. ಮುಸ್ಲಿಮರು ಮಾತ್ರವಲ್ಲದೇ ಎಲ್ಲಾ ಸಮುದಾಯಗಳ ಜನರು ಕೂಡ ರುಚಿ ನೋಡುತ್ತಿದ್ದಾರೆ. ಚಿಕನ್‌ ಸಮೋಸಕ್ಕೆ ₹ 12 ಬೆಲೆ ಇದೆ. ಖೀಮಾ ಹಾಗೂ ಮಟನ್‌ ಸಮೋಸಾವನ್ನು ₹ 15ಕ್ಕೆ ಮಾರಾಟ ಮಾಡಲಾಗುತ್ತಿದೆ. ವೆಜ್‌ ಸಮೋಸಾಕ್ಕೆ ₹ 8 ಬೆಲೆ ಇದೆ.

‘ಮಂಗಳೂರಿನಲ್ಲಿ ಮೀನಿನ ಸಮೋಸ ಮಾಡುತ್ತಾರೆ. ಅಲ್ಲಿಂದಲೇ ನಾನು ಮಾಂಸದಿಂದ ಸಮೋಸ ಮಾಡುವುದನ್ನು ಕಲಿತು ಬಂದಿದ್ದೇನೆ’ ಎಂದು ಗುತ್ತಲು ಬಳಿ ಅಂಗಡಿ ನಡೆಸುತ್ತಿರುವ ಅಮ್ಜದ್‌ ರೆಹಮಾನ್‌ ಹೇಳಿದರು. ನೂರು ಅಡಿ ರಸ್ತೆಯಲ್ಲಿರುವ ‘ಸನಾಭೈ’ಹೋಟೆಲ್‌ನಲ್ಲಿ ಅತೀ ಹೆಚ್ಚು ಸಮೋಸ ಮಾರಾಟವಾಗುತ್ತಿವೆ. ಇಲ್ಲಿ ಸಂಜೆ ಮಾತ್ರವಲ್ಲದೇ ಇಡೀ ದಿನ ಮಾರಾಟ ಮಾಡುತ್ತಾರೆ. ‘ಉಪವಾಸ ಮುಗಿದ ಕೂಡಲೇ ರುಚಿಯಾದ ತಿನಿಸು ತಿನ್ನಬೇಕು ಎನಿಸುತ್ತದೆ. ಹೀಗಾಗಿ ಉಪವಾಸ ನಿರತರು ಸಮೋಸ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಎಂದು ಸನಾಭೈ ಹೇಳಿದರು.

ಬೆಂಗಳೂರಿನಲ್ಲಿ ಖರೀದಿ

‘ರಂಜಾನ್‌ ಆಚರಣೆಯ ಖರೀದಿಗಾಗಿ ಮಂಡ್ಯ ಜಿಲ್ಲೆಯ ಜನರು ಮೈಸೂರು, ಬೆಂಗಳೂರು ನಗರಗಳತ್ತ ಪ್ರಯಾಣ ಬೆಳೆಸುತ್ತಾರೆ. ಮೈಸೂರಿನ ಮೀನಾ ಬಜಾರ್‌, ಬೆಂಗಳೂರಿನ ಶಿವಾಜಿನಗರ ಮಾರುಕಟ್ಟೆಯಿಂದ ಮನೆ ಮಂದಿಗೆ ಬಟ್ಟೆ ಬರೆ ಖರೀದಿ ಮಾಡುತ್ತಾರೆ. ಮಂಡ್ಯದಲ್ಲಿ ಬೆಲೆ ಜಾಸ್ತಿ ಇರುವ ಕಾರಣ ಜನರು ಬೇರೆ ಊರುಗಳತ್ತ ಮುಖ ಮಾಡುತ್ತಾರೆ’ ಎಂದು ಸಾದತ್‌ ಬಡಾವಣೆಯ ಮೊಹಮ್ಮದ್‌ ಬಶೀರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.