ADVERTISEMENT

ರಂಜಿಸಿದ ಎತ್ತಿನ ಗಾಡಿ ಓಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:50 IST
Last Updated 24 ಏಪ್ರಿಲ್ 2012, 8:50 IST
ರಂಜಿಸಿದ ಎತ್ತಿನ ಗಾಡಿ ಓಟದ ಸ್ಪರ್ಧೆ
ರಂಜಿಸಿದ ಎತ್ತಿನ ಗಾಡಿ ಓಟದ ಸ್ಪರ್ಧೆ   

ಶ್ರೀರಂಗಪಟ್ಟಣ: ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಮಾಜಿ ಶಾಸಕ ದಿವಂಗತ ಎಂ.ಶ್ರೀನಿವಾಸ್ ಸ್ಮರಣಾರ್ಥ ಭಾನುವಾರ ಏರ್ಪಡಿಸಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆ ಜನಮನ ರಂಜಿಸಿತು.

ಗ್ರಾಮದ ಸಮೀಪ ಇರುವ ಖಂಡಸಾರಿ ಸಕ್ಕರೆ ಕಾರ್ಖಾನೆ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 48 ಎತ್ತಿನ ಗಾಡಿಗಳು ಪಾಲ್ಗೊಂಡಿದ್ದವು. ಹುಣಸೂರು, ಹಿರಿಯೂರು, ಕೆ.ಆರ್.ನಗರ, ಸಾಲಿಗ್ರಾಮ, ಹಾಸನ, ಮಂಡ್ಯ, ಪಾಂಡವಪುರ ಇತರ ಕಡೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಎತ್ತಿನ ಗಾಡಿಗಳು ಗುರಿಯತ್ತ ಮುನ್ನುಗ್ಗುವಾಗ ಪ್ರೇಕ್ಷಕರು ಶಿಳ್ಳೆ, ಕೇಕೆ ಹಾಕುವ ಮೂಲಕ ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು. ಈ ಸ್ಪರ್ಧೆ ವೀಕ್ಷಿಸಲು ಚಂದಗಾಲು, ಮೇಳಾಪುರ, ಬೆಳವಾಡಿ, ನಗುವನಹಳ್ಳಿ, ಹೊಸೂರು ಇತರ ಗ್ರಾಮಗಳ ಜನರು ಆಗಮಿಸಿದ್ದರು.

  ಸ್ಪರ್ಧೆಯಲ್ಲಿ ಹುಣಸೂರಿನ ರಕ್ಷಿತ್ ಪ್ರಥಮ, ಕೆ.ಆರ್.ನಗರ ತಾಲ್ಲೂಕು ಸಾಲಿಗ್ರಾಮದ ನವೀನ್‌ಕೃಷ್ಣ ದ್ವಿತೀಯ, ಮೈಸೂರು ತಾಲ್ಲೂಕು ಸಿದ್ದಲಿಂಗಪುರದ ಆನಂದ್ ತೃತೀಯ ಹಾಗೂ ಚಂದಗಾಲು ಗ್ರಾಮದ ಹೇಮಂತ್‌ಗೌಡ 4ನೇ ಸ್ಥಾನ ಪಡೆದರು. ಕ್ರಮವಾಗಿ ಪ್ರಥಮ ರೂ.15 ಸಾವಿರ, ದ್ವಿತೀಯ ರೂ.10 ಸಾವಿರ, ತೃತೀಯ ರೂ.7500 ಹಾಗೂ ನಾಲ್ಕನೇ ಬಹುಮಾನವಾಗಿ ರೂ.5 ಸಾವಿರ ನಗದು ಮತ್ತು ಫಲಕ ವಿತರಿಸಲಾಯಿತು.
 
ಶಾಸಕ ರಮೇಶ ಬಂಡಿಸಿದ್ದೇಗೌಡ ಸ್ಪರ್ಧೆಗೆ ಚಾಲನೆ ನೀಡಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ವಿ.ಚಲುವರಾಜು, ಭಾರತ್ ಸೇವಾದಲದ ತಾಲ್ಲೂಕು ಅಧ್ಯಕ್ಷ ಎನ್.ಶಿವಸ್ವಾಮಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.