ADVERTISEMENT

ರಂಜಿಸಿದ ಎತ್ತಿನ ಗಾಡಿ ಓಟ..

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:16 IST
Last Updated 6 ಸೆಪ್ಟೆಂಬರ್ 2013, 6:16 IST

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಗಂಜಾಂನಲ್ಲಿ, ಶ್ರೀ ನಿಮಿಷಾಂಬತಾಯಿ ಭಕ್ತ ಸಮಿತಿ ಗುರುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಎತ್ತಿನಗಾಡಿ ಓಟದ ಸ್ಪರ್ಧೆ ಜನಮನ ರಂಜಿಸಿತು.

ಸ್ಪರ್ಧೆಯಲ್ಲಿ 52 ಜತೆ ಎತ್ತುಗಳು ಪಾಲ್ಗೊಂಡಿದ್ದವು. ಚಿಕ್ಕಮಗಳೂರು, ಅಜ್ಜಂಪುರ, ಸಾಲಿಗ್ರಾಮ, ಕೆ.ಆರ್. ನಗರ, ಮಂಡ್ಯ, ಪಾಂಡವಪುರ, ಮೈಸೂರು ಇತರಡೆಗಳಿಂದ ಎತ್ತುಗಳನ್ನು ಸ್ಪರ್ಧೆಗೆ ಕರೆತರಲಾಗಿತ್ತು. ರೂ 50 ಸಾವಿರದಿಂದ ರೂ 2 ಲಕ್ಷ ಬೆಲೆಯ ವರೆಗಿನ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಹಳ್ಳಿಕಾರ್ ಮತ್ತು ಅಮೃತ ಮಹಲ್ ತಳಿಯ ಎತ್ತುಗಳು ಹೆಚ್ಚು ಕಂಡುಬಂದವು. ಎತ್ತುಗಳು ಗಾಡಿ ಎಳೆದು ಗುರಿಯತ್ತ ಮುನ್ನುಗ್ಗುವ ವೇಳೆ ಗಾಡಿ ಓಡಿಸುವವರು ಮತ್ತು ಜತೆಗಾರರು ಎತ್ತುಗಳಿಗೆ ಚಾಟಿ ಬೀಸಿ ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಮ್ಮ ಕಡೆಯ ಎತ್ತಿನ ಗಾಡಿಗಳು ಸ್ಪರ್ಧೆಗೆ ಇಳಿದಾಗ ಪ್ರೇಕ್ಷಕರು ಅಲಾಲಾ..., ಉಲಾಲಾ... ಎನ್ನುತ್ತಾ, ಸಿಳ್ಳೆ, ಕೇಕೆ ಹಾಕಿ ಪ್ರೋತ್ಸಾಹಿಸಿದರು. ಸ್ಪರ್ಧೆಯಲ್ಲಿ ವಿಜೇತ ಎತ್ತುಗಳ ಮಾಲೀಕರಿಗೆ ಚಿನ್ನವನ್ನು ಬಹುಮಾನ ವಾಗಿ ಇಟ್ಟಿದ್ದರಿಂದ ಸ್ಪರ್ಧೆ ರೋಚಕತೆ ಪಡೆದಿತ್ತು. ಈ ಗ್ರಾಮೀಣ ಕ್ರೀಡೆಯನ್ನು ವೀಕ್ಷಿಸಲು ಸ್ಥಳೀಯರು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಗಳಿಂದಲೂ ಜನರು ಆಗಮಿಸಿದ್ದರು.

ಸೆಮಿ ಫೈನಲ್ ಹಂತದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎತ್ತಿನ ಗಾಡಿಯೊಂದು ಬೈಕ್ ಮೇಲೆ ಹರಿದ ಪರಿಣಾಮ ಸ್ಥಳದಲ್ಲಿ ಕೆಲಕಾಲ ಗೊಂದಲ ಉಂಟಾಗಿತ್ತು. ಆಯೋಜಕರು ಪರಿಸ್ಥಿತಿ ತಿಳಿಗೊಳಿಸಿ ಸ್ಪರ್ಧೆ ನಡೆಯಲು ಅನುವು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.