ಮಂಡ್ಯ: `ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ನ್ಯಾಯಬೆಲೆ ಅಂಗಡಿಗೆ, ಮನೆಯ ವಿದ್ಯುತ್ ಸಂಪರ್ಕದ ಆರ್‌ಆರ್ ಸಂಖ್ಯೆಯನ್ನು ನೀಡಬೇಕು. ಇಲ್ಲದಿದ್ದರೆ ಪಡಿತರ ವಿತರಿಸುವುದಿಲ್ಲ~ ಎಂಬ ಆಹಾರ ಇಲಾಖೆಯ ಕ್ರಮಕ್ಕೆ ರಾಜ್ಯ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
`ಪಡಿತರ ವಿತರಣೆಗೂ, ವಿದ್ಯುತ್ ಮೀಟರ್‌ನ ಆರ್‌ಆರ್ ಸಂಖ್ಯೆಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಅವರು, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಮಾರ್ಚ್ 5ರಂದು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು~ ಎಂದು ಬುಧವಾರ ಪ್ರಕಟಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳಿಗೆ ಈಗ ವಿದ್ಯುತ್ ಮೀಟರ್ ಸಂಖ್ಯೆ ಕೊಡಲು ಪಡಿತರ ಚೀಟಿದಾರರಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳನ್ನೇ ನೇರವಾಗಿ ಸಂಪರ್ಕಿಸಿದರೆ `ಇಲ್ಲ ಅಂಥ ಷರತ್ತು ಇಲ್ಲ ಎನ್ನುತ್ತಾರೆ~. ಈ ಬಗೆಗೆ ಅಧಿಕಾರಿಗಳಿಗೆ ಗೊಂದಲ ಇರುವಂತಿದೆ ಎಂದು ಟೀಕಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಇದೇ ಕಾರಣವನ್ನು ನೆಪವಾಗಿರಿಸಿಕೊಂಡು ಪಡಿತರ ವಿತರಣೆಯನ್ನು ತಡೆಹಿಡಿಯ ಬಾರದು ಎಂದು ಆಗ್ರಹಪಡಿಸಿದ ಅವರು, ಈ ಕುರಿತು ಅಧಿಕಾರಿಗಳ ಗಮನಸೆಳೆದು ಸಮಸ್ಯೆಯನ್ನು ಅರಿವು ಮೂಡಿಸಲು 5ರಂದು (ಸೋಮವಾರ) ಜಿಲ್ಲಾದ್ಯಂತ ಪ್ರತಿಭಟನೆ ನಡೆಸ ಲಾಗುವುದು ಎಂದು ವಿವರಿಸಿದರು.
ಕೃಷಿಗೆ ಹೆಚ್ಚಿನ ಆದ್ಯತೆಗೆ ಕರೆ: ಮುಂಬರುವ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಒತ್ತುನೀಡಬೇಕು. ಆವರ್ತ ನಿಧಿಯಲ್ಲಿ ಹೆಚ್ಚಿನ ಮೊತ್ತ ಇಡುವುದರ ಜೊತೆಗೆ, ಖುಷ್ಕಿ ಪ್ರದೇಶವನ್ನು ಕೃಷಿ ಆದ್ಯತಾ ವಲಯವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದರು.
ಹಿಂದೆ ಯಡಿಯೂರಪ್ಪ ಅವರಂತೇ ಸದಾನಂದಗೌಡರು ಕೃಷಿ ಆಯವ್ಯಯ ಮಂಡಿಸುವ ಮಾತು ಆಡುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅಗತ್ಯ ಸಂಪನ್ಮೂಲವನ್ನೇ ಕಾಯ್ದಿರಿಸದೇ ಯೋಜನೆಗಳನ್ನು ಪ್ರಕಟಿಸಿದರೆ ಅರ್ಥವಿಲ್ಲ ಎಂದರು.
ರೈಲ್ವೆ ಮಾದರಿಯಲ್ಲಿ ಕೃಷಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಯಾಗಬೇಕು. ಗ್ರಾಮ ಪಂಚಾಯಿತಿ ಗಳನ್ನು ಬಲಪಡಿಸುವುದು, ಖುಷ್ಕಿ ಭೂಮಿಯಲ್ಲಿನ ನೀರಾವರಿಗೆ ಒತ್ತು ನೀಡುವುದು, ಅಂತರ್ಜಲ ಮಟ್ಟವನ್ನು ಸುಧಾರಿಸಲು ಪ್ರಾತಿನಿಧ್ಯ ನೀಡುವುದು ಮತ್ತಿತರ ಕ್ರಮಗಳು ಅಗತ್ಯ ಎಂದು ಒತ್ತಾಯಿಸಿದರು.
ಬೆಂಬಲ ಬೆಲೆ: ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಖರೀದಿಯಲ್ಲಿ ದಲ್ಲಾಳಿಗಳಿಗೇ ಹೆಚ್ಚಿನ ಲಾಭ ಆಗುತ್ತಿದೆ ಎಂದು ಟೀಕಿಸಿದ ಅವರು, ಭತ್ತ ಕಟಾವು ಆಗುವ ಮುನ್ನವೇ ಬೆಂಬಲ ಬೆಲೆಯನ್ನು ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆದಾಗ ಮಾತ್ರವೇ ಈ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.
ಬಜೆಟ್ ಹಿನ್ನೆಲೆಯಲ್ಲಿ ಮಾರ್ಚ್ ಮೊದಲ ವಾರ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದೇನೆ ಎಂದರು. ಗೋಷ್ಠಿ ಯಲ್ಲಿ ಮುಖಂಡ ಹನಿಯಂಬಾಡಿ ನಾಗರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.