ADVERTISEMENT

‘ರೈತರ ಬೇಡಿಕೆ ಈಡೇರಿಸಲು ಅಧಿಕಾರ ಬೇಕು’

ಮಂಡ್ಯ ಜೆಡಿಎಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್‌ ಪರ ಎಚ್‌.ಡಿ.ಕುಮಾರಸ್ವಾಮಿ ರೋಡ್‌ ಷೋ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 13:13 IST
Last Updated 29 ಏಪ್ರಿಲ್ 2018, 13:13 IST

ಮಂಡ್ಯ: ‘ಕಾಂಗ್ರೆಸ್‌ ಪಕ್ಷ ಸುಳ್ಳು ಭರವಸೆ ನೀಡುತ್ತಿದೆ. ಅವರ ಮಾತು ನಂಬಿ ಜನರು ಮೋಸ ಹೋಗಬಾರದು. ಕಳೆದ ಐದು ವರ್ಷಗಳಿಂದ ದುರಾಡಳಿತ ನಡೆಸಿ ಜನರಿಗೆ ಮೋಸ ಮಾಡಿದ್ದಾರೆ. ಮುಂದೆ ಜೆಡಿಎಸ್‌ ಅಧಿಕಾರಕ್ಕೆ ಬರಲಿದ್ದು ಜನೋಪಯೋಗಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಪರ ಶನಿವಾರ ನಗರದಲ್ಲಿ ರೋಡ್‌ ಷೋ ನಡೆಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ತಡೆಯಲು ವಿಶೇಷ ಯೋಜನೆ ಸಿದ್ಧ ಮಾಡಲಾಗಿದೆ. ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಜೊತೆಗೆ ಮುಂದೆ ರೈತರು ಸಾಲಗಾರರು ಆಗದಂತೆ ತಡೆಯಲು ರೈತಪರ ಯೋಜನೆಗಳನ್ನು ಸಿದ್ಧಮಾಡಲಾಗಿದೆ. ರೈತರ ಬೇಡಿಕೆಗಳನ್ನು ಈಡೇರಿಸಲು, ರೈತಪರ ಯೋಜನೆ ಜಾರಿಗೊಳಿಸಲು ಅಧಿಕಾರ ಬೇಕಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯಬೇಕು. ಕಾಂಗ್ರೆಸ್ ಸರ್ಕಾರ ಐದು ವರ್ಷ ಅಧಿಕಾರ ನಡೆಸಿ ಜನರಿಗೆ ಯಾವುದೆ ಶಾಶ್ವತ ಯೋಜನೆ ಜಾರಿ ಮಾಡಿಲ್ಲ. ಕೇವಲ ಕೆಸರೆರಚಾಟ ಮಾಡುತ್ತಲೇ ಐದು ವರ್ಷ ಮುಗಿಸಿದ್ದಾರೆ. ಜಿಲ್ಲೆಯಲ್ಲಿ ದಲಿತರು ಹಾಗೂ ಅಲ್ಪಸಂಖ್ಯಾತರು ಹೆಚ್ಚಾಗಿದ್ದು, ಕೋಮು ಹಾಗೂ ಜಾತಿ ರಾಜಕಾರಣದಿಂದ ಹೊರತಾದ ಜೆಡಿಎಸ್ ಹಾಗೂ ಬಿಎಸ್‌ಪಿ ಸಮ್ಮಿಲನದ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾಗಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಮನೆಗೊಂದು ಉದ್ಯೋಗ ಸೃಷ್ಟಿಸಲಿದೆ. ಕಳೆದ ಐದು ವರ್ಷಗಳಿಂದ ಆಡಳಿತ ನಡೆಸಿದ ಸರ್ಕಾರ 2.5 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡದೆ ಖಾಲಿ ಬಿಟ್ಟಿದೆ. ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಉದ್ಯೂಗ ಸೃಷ್ಟಿ ಮಾಡುತ್ತೇವೆ ಎಂದು ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಸುಳ್ಳು ಮಾತುಗಳನ್ನು ನಂಬಿ ಜನರು ಮೋಸ ಹೋಗಬಾರದು. ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಕೃಷಿ ಸಂಬಂಧಿತ ಉದ್ಯೋಗ ಸೃಷ್ಟಿಸಲಾಗುವುದು’ ಎಂದು ಹೇಳಿದರು.

‘ಬಡವರ್ಗದ ಜನರ ಮಕ್ಕಳಿಗೆ ಉಚಿತವಾದ ಗುಣಾತ್ಮಕ ಶಿಕ್ಷಣ ನೀಡಲು ಯೋಜನೆ ರೂಪಿಸಲಾಗುವುದು. ರಾಜ್ಯದಾದ್ಯಂತ ಆರೋಗ್ಯ ಕಾರ್ಯಕ್ರಮ ಜಾರಿಗೊಳಿಸಲಾಗುವುದು. ಗರ್ಭಿಣಿ ಯರಿಗೆ 6 ತಿಂಗಳವರೆಗೆ ಮಾಸಾಶನ ನೀಡಲಾಗುವುದು. 70 ವರ್ಷ ಮೇಲ್ಪಟ್ಟ ವೃದ್ಧರಿಗೆ ₹5 ಸಾವಿರ ಮಾಸಿಕ ವೇತನ, ಅಂಗವಿಕಲ ಹಾಗೂ ವಿಧವೆಯರಿಗೆ ₹ 2 ಸಾವಿರ ಮಾಸಿಕ ವೇತನ ನೀಡಲಾಗುವುದು. ಸಮಾಜದ ಎಲ್ಲಾ ವರ್ಗದ ಜನರಿಗೆ ಯೋಜನೆ ರೂಪಿಸಿ ಪ್ರತಿಯೊಬ್ಬರಿಗೂ ಅದರ ಫಲ ತಲುಪುವಂತೆ ಮಾಡಲಾಗುವುದು’ ಎಂದು ಹೇಳಿದರು.

‘ಜಿಲ್ಲೆಯ ಜನರು ನನ್ನನ್ನು ಕುಟುಂಬದ ಒಬ್ಬ ಸದಸ್ಯನಾಗಿ ಸಹೋದರನಂತೆ ತಿಳಿದುಕೊಂಡಿದ್ದಾರೆ. ನಿಮ್ಮ ಕುಟುಂಬದ ಸಹೋದರ ಸಂಬಂಧವನ್ನು ಜೆಡಿಎಸ್‌ಗೆ ಮತ ಹಾಕುವ ಮೂಲಕ ಬಲಪಡಿಸಬೇಕು. ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಶ್ರೀನಿವಾಸ್ ಜನಪರ ಕಾಳಜಿಯುಳ್ಳ ವ್ಯಕ್ತಿ. ಕ್ಷೇತ್ರದ ಜನರ ಎಲ್ಲ ಕಷ್ಟ ನಷ್ಟಗಳಲ್ಲಿ ಪಾಲ್ಗೊಂಡು ಸಹಾಯ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಎಲ್ಲರ ಸಹಕಾರ ಅವರಿಗೆ ಬೇಕಾಗಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಲಿನ ಭೀತಿ ಆರಂಭವಾಗಿದೆ. ಹೀಗಾಗಿ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಕದಲುತ್ತಿಲ್ಲ. ನಾನು ನನ್ನ ಕ್ಷೇತ್ರಬಿಟ್ಟು ರಾಜ್ಯದ ವಿವಿಧೆಡೆ ಪ್ರಚಾರ ಮಾಡುತ್ತಿದ್ದೇನೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ’ ಎಂದು ಟಾಂಗ್‌ ಕೊಟ್ಟರು.

ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್ ಮಾತನಾಡಿ ‘ರಾಜ್ಯದಲ್ಲಿ ರೈತ ಹಾಗೂ ಜನಪರ ಸರ್ಕಾರ ನೋಡಬೇಕಾದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಅದು ನಮ್ಮೆಲ್ಲರ ಜವಾಬ್ದಾರಿಯೂ ಆಗಿದೆ. ರೈತರು ನೆಮ್ಮದಿಯಿಂದ ಇರಬೇಕಾದರೆ ಜೆಡಿಎಸ್‌ ಸರ್ಕಾರ ರಚನೆಯಾಗಬೇಕು’ ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಡಿ.ರಮೇಶ್, ಕೆ.ಟಿ.ಶ್ರೀಕಂಠೇಗೌಡ, ಅಶೋಕ್‌ ಜಯರಾಂ, ಕೆ.ಕೆ.ರಾಧಾಕೃಷ್ಣ, ಜಫ್ರುಲ್ಲಾ ಖಾನ್, ಡಾ.ಕೃಷ್ಣ, ಬಿಎಸ್‌ಪಿ ಮುಖಂಡ ರಾಜು ಈ ಸಂದರ್ಭದಲ್ಲಿ ಇದ್ದರು.

ಜಮೀರ್‌, ಬಾಲಕೃಷ್ಣಗೆ ತಿರುಗೇಟು

‘ಮಾಜಿ ಶಾಸಕ ಬಾಲಕೃಷ್ಣ ನನ್ನ ಪುತ್ರ ನಿಖಿಲ್‌ ವಿರುದ್ಧ ಅದ್ಯಾವ ಬಾಂಬ್‌ ಸಿಡಿಸುತ್ತಾರೋ ಸಿಡಿಸಲಿ. ನಮ್ಮ ವಿರುದ್ಧ ಯಾವುದೇ ಆಧಾರಗಳಿದ್ದರೆ ಸಿಡಿ ಬಿಡುಗಡೆ ಮಾಡಲಿ. ನಾನೂ ನೋಡಿಯೇ ಬಿಡುತ್ತೇನೆ. ಅದೇನು ಮಾಡುತ್ತಾರೋ ಮಾಡಲಿ’ ಎಂದು ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು.

‘ಜಮೀರ್‌ ಅಹಮದ್‌ ಖಾನ್‌ ಕೈಯಲ್ಲಿ ನನ್ನ ಭವಿಷ್ಯ ಇಲ್ಲ. ನನ್ನ ಭವಿಷ್ಯ ಇರುವುದು ರಾಮನಗರ ಹಾಗೂ ಚನ್ನಪಟ್ಟಣ ಜನರ ಕೈಯಲ್ಲಿ. ಹೀಗಿರುವಾರ ಜಮೀರ್‌ ನನ್ನನ್ನು ಸೋಲಿಸಲು ಹೇಗೆ ಸಾಧ್ಯ? ಅವರ ಮಾತುಗಳಿಗೆ ನಾನು ಉತ್ತರ ಕೊಡಬೇಕಾಗಿಲ್ಲ’ ಎಂದು ತಿರುಗೇಟು ನೀಡಿದರು.

ಮಹಿಳೆಯರಿಂದ ಬೈಕ್‌ ರ‍್ಯಾಲಿ

ಮೆರವಣಿಗೆಯುದ್ದರೂ ನೂರಾರು ಜನರು ಬೈಕ್‌ ರ‍್ಯಾಲಿ ನಡೆಸಿದರು. ರ‍್ಯಾಲಿಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮುಂದೆ ಕುಮಾರಸ್ವಾಮಿ ತೆರೆದ ವಾಹನದಲ್ಲಿ ರೋಡ್‌ ಷೋ ನಡೆಸಿದರೆ, ಅವರ ಹಿಂದೆ ಕಾರ್ಯಕರ್ತರು ಬೈಕ್‌ಗಳಿಗೆ ಜೆಡಿಎಸ್‌ ಬಾವುಟ ಕಟ್ಟಿಕೊಂಡು ರ‍್ಯಾಲಿ ನಡೆಸಿದರು.

ಬಾರದ ಎಚ್‌ಡಿಕೆ: ಅಸಮಾಧಾನ

ಮಂಡ್ಯದಲ್ಲಿ ರೋಡ್‌ ಷೋ ನಂತರ ಕುಮಾರಸ್ವಾಮಿ ಚಿಕ್ಕಮಂಡ್ಯ, ಹುಲಿವಾನ, ಹಲ್ಲೇಗೆರೆ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಬೇಕಾಗಿತ್ತು. ಬೆಳಿಗ್ಗೆಯಿಂದಲೂ ಗ್ರಾಮಸ್ಥರು ಎಲ್ಲಾ ಸಿದ್ಧತೆ ಮಾಡಿಕೊಂಡು ಕಾದು ಕುಳಿತಿದ್ದರು. ಆದರೆ ಕುಮಾರಸ್ವಾಮಿ ಮಂಡ್ಯದಿಂದ ಚಿಂತಾಮಣಿಗೆ ತೆರಳಿದ ಕಾರಣ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಸಾವಿರಾರು ರೂಪಾಯಿ ಖರ್ಚು ಮಾಡಿ ಸಿದ್ದತೆ ಮಾಡಿಕೊಂಡಿದ್ದೆವು. ಹಾರ, ತುರಾಯಿಯೊಂದಿಗೆ ಕುಮಾರಸ್ವಾಮಿಗೆ ಕಾಯುತ್ತಿದ್ದೆವು. ಎಲ್ಲಾ ಕೆಲಸ ಬಿಟ್ಟು ಊರಿನಲ್ಲೇ ಇದ್ದೆವು. ಆದರೂ ಅವರು ಬರಲಿಲ್ಲ. ಅವರಿಗೆ ಗ್ರಮಸ್ಥರ ಮೇಲೆ ಕಾಳಜಿಯಿಲ್ಲ ಎಂದು ಚಿಕ್ಕಮಂಡ್ಯ ಗ್ರಾಮಸ್ಥರು ದೂರಿದರು.

ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ಗೆ ಸೇರ್ಪಡೆ

ನಗರಸಭೆ ಮಾಜಿ ಸದಸ್ಯ ಶಂಕರ್‌ ಶನಿವಾರ ಕಾಂಗ್ರೆಸ್‌ ತ್ಯಜಿಸಿ ಜೆಡಿಎಸ್‌ಗೆ ಸೇರ್ಪಡೆಯಾದರು. ಶಂಕರ್‌ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಅವರು ಜೆಡಿಎಸ್‌ ಸೇರಿದರು. ಕಾಂಗ್ರೆಸ್‌ ಅಭ್ಯರ್ಥಿ ಎಂ.ಶ್ರೀನಿವಾಸ್‌ ಅವರ ಪರವಾಗಿ ಕೆಲಸ ಮಾಡುವುದಾಗಿ ಶಂಕರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.