ADVERTISEMENT

ರೈತರ ಮೇಲೆ ಹಲ್ಲೆ ಖಂಡಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2011, 6:40 IST
Last Updated 27 ಮಾರ್ಚ್ 2011, 6:40 IST
ರೈತರ ಮೇಲೆ ಹಲ್ಲೆ ಖಂಡಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ
ರೈತರ ಮೇಲೆ ಹಲ್ಲೆ ಖಂಡಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ   

ಪಟ್ಟಣದ ಪ್ರಮುಖ ವೃತ್ತದಿಂದ ಬಾರುಕೋಲು ಹಿಡಿದು ಮೆರವಣಿಗೆ ಯಲ್ಲಿ ತೆರಳಿದ ರೈತರು, ಪೊಲೀಸ್ ಠಾಣೆಯ ಬಳಿಗೆ ತೆರಳು ಎರಡು ಗಂಟೆ ಕಾಲ ಧರಣಿ ನಡೆಸಿದರು. ಲಾಠಿಪ್ರಹಾರದ ಹಿನ್ನೆಲೆಯಲ್ಲಿ ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತು ಪಡಿಸಬೇಕು ಎಂದು ರೈತರು ಆಗ್ರಹಿಸಿದರು.
ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಮೊಳಗಿಸಿದ ಕಾರ್ಯ ಕರ್ತರು ಅರ್ಧ ಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ಧರಣಿ ಕುಳಿತರು. ಹೀಗಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತು.

ರೈತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ರೈತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂಥದೇ ರಿಸ್ಥಿತಿ ಮುಂದುವರಿದರೆ ರೈತರು ನಕ್ಸಲೈಟ್‌ಗಳಾದರೂ ಆಶ್ಚರ್ಯವಿಲ್ಲ ಎಂದು ರೈತ ಸಂಘ ಮುಖಂಡ ಕೆ.ಎಸ್.ನಂಜುಂಡೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು.


ಇನ್ನಾದರೂ ಸರ್ಕಾರ ಇಂಥ ಪ್ರವೃತ್ತಿಗಳಿಗೆ ಕಡಿವಾಣ ಹಾಕಬೇಕು. ಈಗ ದೌರ್ಜನ್ಯ ಎಸಗಿರುವ ಪೊಲೀಸರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಮತ್ತು ಘಟನೆಗೆ ನೇರ ಹೊಣೆ ಮಾಡಿ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅಮಾನತು ಪಡಿಸಬೇಕು ಎಂದು ಆಗ್ರಹಪಡಿಸಿದರು.

ADVERTISEMENT


ಪ್ರತಿಭಟನೆಯಲ್ಲಿ ನೂರಕ್ಕೂ ಅಧಿಕ ರೈತರು ಭಾಗವಹಿಸಿದ್ದು, ಬಳಿಕ ನಂಜುಂಡೇಗೌಡ ನೇತೃತ್ವದಲ್ಲಿ ರೈತರು ತಹಶೀಲ್ದಾರ್ ಅರುಳ್‌ಕುಮಾರ್ ಅವರಿಗೆ ಮನವಿ ಅರ್ಪಿಸಿದರು. ತಾಲ್ಲೂಕು ಘಟಕದ ಅಧ್ಯಕ್ಷ ಕೆಂಪೇಗೌಡ, ಕೃಷ್ಣೇಗೌಡ, ಪಾಂಡು, ಜಯ ರಾಮೇಗೌಡ ಮತ್ತಿತರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.


ರೈತರ ಮೇಲೆ ಹಲ್ಲೆ: ಕ್ರಮಕ್ಕೆ ಆಗ್ರಹ

ಪಾಂಡವಪುರ: ರೈತ ಮತ್ತು ಕೂಲಿ ಕಾರ್ಮಿಕರ ಮೇಲೆ ಕೊಪ್ಪಳದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿ ರುವು ದನ್ನು ಖಂಡಿಸಿ ತಾಲ್ಲೂಕು ರೈತಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಶನಿವಾರ ರಸ್ತೆತಡೆ ನಡೆಸಿ ಪ್ರತಿಭಟಿಸಿದರು. ಪಟ್ಟಣದ ಐದು ದೀಪದ ವೃತ್ತದಲ್ಲಿ ಸೇರಿದ ನೂರಾರು ರೈತಸಂಘದ ಕಾರ್ಯಕರ್ತರು ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿಯನ್ನು ಅರ್ಧಗಂಟೆ ಕಾಲ ತಡೆದು ಪೊಲೀಸ್ ಹಾಗೂ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.


ಕೊಪ್ಪಳದಲ್ಲಿ ರೈತ ಮತ್ತು ಕೂಲಿಕಾರ್ಮಿಕರ ಮೇಲಿನ ದೌರ್ಜನ್ಯ ವಿರೋಧಿಸಿ ಈ ಘಟನೆಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ತೀವ್ರವಾಗಿ ಒತ್ತಾಯಿಸಿದರು.


ಕೊಪ್ಪಳದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿಸುವ ಕೂಲಿ ಕಾರ್ಮಿಕರಿಗೆ ಹಣ ಪಾವತಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಕಚೇರಿಯ ಮುಂದೆ ರೈತರು ಹಾಗೂ ಕೂಲಿಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರೆ ಪೊಲೀಸರು ಮನಬಂದಂತೆ ಹಲ್ಲೆ ನಡೆಸಿರುವುದು ಸರಿಯಲ್ಲ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ತಕ್ಷಣ ಈ ಘಟನೆಯ ಬಗ್ಗೆ ಗಮನಹರಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.


ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಗೋ. ಕೃಷ್ಣಮೂರ್ತಿ ಭೇಟಿ ನೀಡಿ ಪ್ರತಿಭಟನಾಕಾರರನ್ನು ಮನವೊಲಿಸಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡರು. ಶ್ರೀರಂಗಪಟ್ಟಣ ಬೀದರ್ ಹೆದ್ದಾರಿಯಲ್ಲಿ ಅರ್ಧಗಂಟೆ ಕಾಲ ರಸ್ತೆತಡೆ ನಡೆಸಿದ ಪರಿಣಾಮ ಮೈಸೂರು, ಕೆ.ಆರ್.ಪೇಟೆ, ನಾಗಮಂಗಲ, ಮಂಡ್ಯ ಮಾರ್ಗದ ಸಂಚಾರ ಕೆಲಕಾಲ ವ್ಯತ್ಯಾಸಗೊಂಡಿತ್ತು. ಪ್ರತಿಭಟನೆಯಲ್ಲಿ ರೈತಸಂಘದ ಜಿ.ಪಂ ಸದಸ್ಯ ಎ.ಎಲ್. ಕೆಂಪೂಗೌಡ, ತಾ.ಪಂ ಅಧ್ಯಕ್ಷೆ ಮಹಾಲಕ್ಷ್ಮಿ,, ಸದಸ್ಯೆ ಗೌಡೇಗೌಡ, ವಿಜಯ್‌ಕುಮಾರ್, ಹರವು ಪ್ರಕಾಶ್ ನೇತೃತ್ವ ವಹಿಸಿದ್ದರು.


ಪೊಲೀಸ್ ದೌರ್ಜನ್ಯ ಖಂಡಿಸಿ ಹೆದ್ದಾರಿ ತಡೆ

ಮದ್ದೂರು: ಕೊಪ್ಪಳ ರೈತರ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ರೈತ ಸಂಘದ ಕಾರ್ಯಕರ್ತರು ಸಮೀಪದ ಗೆಜ್ಜಲಗೆರೆ ಬಳಿ ಶನಿವಾರ ಹೆದ್ದಾರಿ ತಡೆ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು ಮಾತನಾಡಿ, ರಾಜ್ಯದಲ್ಲಿ ರೈತರ ಮೇಲೆ ಪೊಲೀಸರ ದೌರ್ಜನ್ಯ ಮಿತಿ ಮೀರಿದೆ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ರೈತರು ಹಾಗೂ ಕೂಲಿಕಾರ್ಮಿಕರ ಮೇಲೆ ಪೊಲೀಸರು ಲಾಠಿ-ಬೂಟು ಮೂಲಕ ಅಮಾನವೀಯ ದೌರ್ಜನ್ಯ ನಡೆಸಿರುವುದು ನಿಜಕ್ಕೂ ನಾಚಿಕೆಗೇಡು. ಈ ಸರ್ಕಾರಕ್ಕೆ ಪಂಚೇಂದ್ರಿಯಗಳಿದ್ದರೆ, ಕೂಡಲೇ ತಪ್ಪಿತಸ್ಥ ಪೊಲೀಸರ ಮೇಲೆ ನಿರ್ದಾಕ್ಷಿಣ್ಯ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು. ರೈತ ನಾಯಕಿ ಸುನಂದ ಜಯರಾಂ ಮಾತನಾಡಿ, ಹಸಿರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು, ಇದುವರೆಗೂ ರೈತರ ಮೇಲಾಗುತ್ತಿರುವ ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಮುಂದಾಗಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸೀತರಾಮು, ಮುಖಂಡರಾದ ಉಮೇಶ್, ಲಲಿತಮ್ಮ, ಗೌರಮ್ಮ, ರಾಮಕೃಷ್ಣಯ್ಯ, ನಾಗರಾಜು, ಸಿದ್ದೇಗೌಡ, ಜಿ.ಎ.ಶಂಕರ್, ರಾಜೇಶ್, ಸತೀಶ್, ರಾಮಲಿಂಗಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.


ಕೊಪ್ಪಳ ದೌರ್ಜನ್ಯ: ಪ್ರಜಾಪ್ರಭುತ್ವದ ಕಗ್ಗೊಲೆ
ಮದ್ದೂರು: ಕೊಪ್ಪಳದಲ್ಲಿ ರೈತರ ಮೇಲೆ ಪೊಲೀಸರು ಎಸಗಿದ ದೌರ್ಜನ್ಯ ಅಮಾನವೀಯ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣಗೌಡ ಶನಿವಾರ ಕಿಡಿ ಕಾರಿದರು.


ವೇದಿಕೆಯ ತಾಲ್ಲೂಕು ಅಧ್ಯಕ್ಷ ಅಶೋಕ್, ನಗರಾಧ್ಯಕ್ಷ ಮಹದೇವು ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಬಂದ ನಂತರ ರೈತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ರೈತರ ಮೇಲೆ ಗುಂಡಿಟ್ಟಿದ್ದು, ಕೈಕೊಳ ಹಾಕಿದ್ದು, ಲಾಠಿ ಬೂಟುಗಳ ರುಚಿ ತೋರಿಸಿದ್ದು, ಈ ಸರ್ಕಾರ ಸಾಧನೆಯಾಗಿದೆ ಎಂದು ಖಂಡಿಸಿದರು.


ರಾಜ್ಯ ಉಪಾಧ್ಯಕ್ಷ ಮಾ.ಸೋ.ಚಿದಂಬರ್, ಮಹಿಳಾಉಪಾಧ್ಯಕ್ಷೆ ಸೌಭಾಗ್ಯಮಹದೇವು, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ಮಹದೇವು, ವಾಸು, ಕೃಷ್ಣಪ್ಪ, ನಿಂಬೆ ಶಂಕರ್ ಸೇರಿದಂತೆ ಹಲವರು ಇದ್ದರು.

ಮಂಡ್ಯ: ಕೊಪ್ಪಳದಲ್ಲಿ ಪ್ರತಿಭಟನಾ ನಿರತ ರೈತರು, ಮಹಿಳೆಯರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಕ್ರಮಕ್ಕೆ ನಗರದಲ್ಲೂ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ರೈತ ಸಂಘದ ಕಾರ್ಯಕರ್ತರು ಶನಿವಾರ ಬಸ್ ನಿಲ್ದಾಣದ ಬಳಿಯ ವೃತ್ತದಲ್ಲಿ ಸೇರಿ ಪ್ರತಿಭಟನೆ ನಡೆಸಿದರು.
 

ಬೆಳಿಗ್ಗೆ ಬಸ್ ನಿಲ್ದಾಣ ಬಳಿಯ ವೃತ್ತದಲ್ಲಿ ಗುಂಪುಗೂಡಿದ ರೈತರು ಸರ್ಕಾರ ಮತ್ತು ಪೊಲೀಸರ ವಿರುದ್ಧ ಧಿಕ್ಕಾರದಘೋಷಣೆಗಳನ್ನು ಕೂಗಿದರು. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ನೀಡದ ಸರ್ಕಾರ ಪೊಲೀಸರನ್ನು ಬಳಸಿಕೊಂಡು ರೈತರನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
 

ಕೊಪ್ಪಳದಲ್ಲಿ ನಡೆದ ಲಾಠಿ ಪ್ರಹಾರವನ್ನು ರೈತ ಸಂಘ ತೀವ್ರವಾಗಿ ಖಂಡಿಸಲಿದ್ದು, ಸರ್ಕಾರ ಕೂಡಲೇ ಗಮನಹರಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
 

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬಸ್ ನಿಲ್ಧಾಣ ಬಳಿಯ ವೃತ್ತದಲ್ಲಿ ಕೆಲ ಹೊತ್ತು ಧರಣಿ ಕುಳಿತ ಕಾರಣ ವಾಹನ ಸಂಚಾರಕ್ಕೆ ಕೆಲಹೊತ್ತು ಅಡಚಣೆಯಾಯಿತು.ರೈತ ಮುಖಂಡರಾದ ಸುರೇಶ್, ಸಿದ್ದೇಗೌಡ, ಬಳ್ಳಾರಿಗೌಡ, ಹನಿಯಂಬಾಡಿ ನಾಗರಾಜು, ಹಲ್ಲೇಗೆರೆ ಶಿವರಾಮು ಮತ್ತಿತರರು ಪ್ರತಿಭಟನೆ ಮುಂಚೂಣಿಯಲ್ಲಿದ್ದರು.
 

ಶ್ರೀರಂಗಪಟ್ಟಣ: ಹಲ್ಲೆ ವಿರುದ್ಧ ಅರೆಬೆತ್ತಲೆ ಮೆರವಣಿಗೆ

ಶ್ರೀರಂಗಪಟ್ಟಣ: ಕೊಪ್ಪಳದಲ್ಲಿ ರೈತರ ಮೇಲೆ ಪೊಲೀಸರ ಲಾಠಿ ಪ್ರಹಾರವನ್ನು ಖಂಡಿಸಿದ ರೈತರು ಪಟ್ಟಣದಲ್ಲಿ ಶನಿವಾರ ಅರೆಬೆತ್ತಲೆ ಮೆರವಣಿಗೆ, ಬಾರುಕೋಲು ಚಳವಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.