ಮಂಡ್ಯ: ನೋಡಲ್ ಅಧಿಕಾರಿಗಳ ನೇಮಕ, ಕಾಲ್ ಸೆಂಟರ್ ಸ್ಥಾಪನೆ, ಮತದಾರರ ಜಾಗೃತಿ ಅಭಿಯಾನ ಆರಂಭಿಸುವ ಮೂಲಕ ಮಂಡ್ಯ ಲೋಕಸಭಾ ಚುನಾವಣೆಯ ಸಿದ್ಧತೆಗಳನ್ನು ತೀವ್ರಗೊಳಿಸಲಾಗಿದೆ.
ಗುರುವಾರ ಸುದ್ದಿಗಾರರಿಗೆ ತಿಳಿಸಿದ ಜಿಲ್ಲಾಧಿಕಾರಿಯೂ ಆದ ಚುನಾವಣಾಧಿಕಾರಿ ಡಾ.ಅಜಯ್ ನಾಗಭೂಷಣ್, ಮಾರ್ಚ್ 19 ರಂದು ಅಧಿಸೂಚನೆ ಹೊರಡಿಸಲಾಗುವುದು. ಮಾರ್ಚ್ 26ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು ಎಂದು ಹೇಳಿದರು.
ಮಾ.27 ರಂದು ನಾಮಪತ್ರ ಪರಿಶೀಲಿಸಲಾಗುವುದು. ಮಾ.29 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ. ಏ.17 ರಂದು ಮತದಾನ ನಡೆಯಲಿದೆ ಎಂದು ಹೇಳಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಬಗೆಗೆ ತೀವ್ರ ನಿಗಾವಹಿಸಲಾಗುವುದು. ಮದ್ಯ ಮಾರಾಟದ ಬಗೆಗೆ ನಿತ್ಯವೂ ವರದಿ ಮಾಡುವಂತೆ ಅಂಗಡಿಗಳ ಮಾಲೀಕರಿಗೆ ಸೂಚಿಸಲಾಗಿದೆ ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 16,41,671 ಮಂದಿ ಮತದಾರರಿದ್ದು, ಅದರಲ್ಲಿ 8,25,758 ಮಂದಿ ಪುರುಷರು, 8,15,913 ಮಂದಿ ಮಹಿಳೆಯರು ಇದ್ದಾರೆ. ಹೊಸದಾಗಿ 2,133 ಮಂದಿ ನೋಂದಣಿ ಮಾಡಿ ಕೊಂಡಿದ್ದಾರೆ. ಅರ್ಜಿಗಳ ಪರಿಶೀಲನೆ ನಡೆದಿದೆ. ಜ.31ಕ್ಕೆ ಅಂತ್ಯಗೊಂಡಿರುವ ಮತದಾರರ ಪರಿಸ್ಕೃತ ಪಟ್ಟಿಯ ಆಧಾರದ ಮೇಲೆ ಚುನಾವಣೆ ನಡೆಸಲಾಗುವುದು. ಮಾ.16ರ ವರೆಗೂ ಸೇರ್ಪಡೆ ಹಾಗೂ ಆಕ್ಷೇಪಣೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಮಾದರಿ ನೀತಿ ಸಂಹಿತೆಯು ಜಾರಿಗೆ ಬಂದಿದ್ದು, ಎಲ್ಲ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲು ಸೂಚಿಸಲಾಗಿದೆ. ಪ್ರವಾಸಿ ಮಂದಿರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೋಸ್ಟರ್‌್, ಫಲಕಗಳ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.
ಚುನಾವಣಾ ಕಾರ್ಯಕ್ಕಾಗಿ ಸಿಬ್ಬಂದಿ ಅವಶ್ಯವಿರುವುದರಿಂದ ಪರಿಸ್ಥಿತಿಯನ್ನು ಪರಿಗಣಿಸಿ, ಒಂದು ಅಥವಾ ಎರಡು ದಿನ ಸಾಂದರ್ಭಿಕ ರಜೆ ಹೊರತುಪಡಿಸಿ ದೀರ್ಘಕಾಲ ರಜೆ ಮಂಜೂರು ಮಾಡದಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಬಹುದಾಗಿದೆ. ಆ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಿಂಗಲ್ ವಿಂಡೋ ಒಂದನ್ನು ಆರಂಭಿಸಲಾಗುವುದು. 24 ಗಂಟೆಗಳಲ್ಲಿಯೇ ಕಾರ್ಯಕ್ರಮಕ್ಕೆ ಅನುಮತಿ ನೀಡುವ ಇಲ್ಲವೇ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸದರು.
ಮಾ.9 ರಂದು ವಿಶೇಷ ಅಭಿಯಾನ: ಈಗಾಗಲೇ ಗುರುತಿಸಲಾಗಿರುವ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಮಾ.9 ರಂದು ಮತದಾರರ ಪಟ್ಟಿಯನ್ನು ಪ್ರದರ್ಶಿಸಲಾಗುವುದು.
ಮತಗಟ್ಟೆಯಲ್ಲಿ ಬೆಳಿಗ್ಗೆ 10 ರಿಂದ 5ರ ವರೆಗೆ ಪ್ರದರ್ಶಿಸಲಾಗುತ್ತಿದ್ದು, ಮತದಾರರು ಆಗಮಿಸಿ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳಬೇಕು. ತಿದ್ದುಪಡಿ, ಸೇರ್ಪಡೆಗಳಿದ್ದರೆ ಅರ್ಜಿ ಸಲ್ಲಿಸಬೇಕು.
ಶ್ರೀರಂಗಪಟ್ಟಣ: ಮತಕೇಂದ್ರ ಪರಿಶೀಲನೆ
ಶ್ರೀರಂಗಪಟ್ಟಣ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿಯೋಜಿತ ಸಹಾಯಕ ಚುನಾವಣಾಧಿಕಾರಿ ಡಾ.ಪ್ರಸಾದ್‌ಮೂರ್ತಿ ಗುರುವಾರ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಹೋಬಳಿಯ ವಿವಿಧ ಮತಕೇಂದ್ರ (ಪೋಲಿಂಗ್ ಸ್ಟೇಷನ್)ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಟ್ಟಣ ಮಿನಿ ವಿಧಾನಸೌಧದಲ್ಲಿ ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಬೂತ್‌ಗಳ ಸ್ಥಿತಿಗತಿ ವೀಕ್ಷಿಸಿದರು. ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಚುನಾವಣೆಗೆ ನಿಯೋಜಸಲಿದ್ದು, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮತದಾರರ ಪಟ್ಟಿ, ವಾಹನ, ಭದ್ರತಾ ಸಿಬ್ಬಂದಿಯ ಅಗತ್ಯತೆ ಕುರಿತು ಚರ್ಚೆ ನಡೆಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದ್ದು, ಕಾರ್ಯಕ್ರಮಗಳ ಬಗ್ಗೆ ನಿಗಾ ಇಡಲಾಗುತ್ತಿದೆ ಎಂದು ಡಾ.ಪ್ರಸಾದ್‌ಮೂರ್ತಿ ತಿಳಿಸಿದರು.
ಫ್ಲೆಕ್‌್ಸ, ಬ್ಯಾನರ್ ತೆರವು ಮಾಡಿಸುವಂತೆ ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ. ಶ್ರೀರಂಗಪಟ್ಟಣದ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 245 ಮತ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದರು.
ಸೂಕ್ಷ್ಮ, ಅತಿಸೂಕ್ಷ್ಮ ಮತ್ತು ಸಾಮಾನ್ಯ ಮತ ಕೇಂದ್ರಗಳ ಪಟ್ಟಿ ಸಿದ್ದಪಡಿಸಲಾಗುತ್ತಿದೆ. ಪ್ರತಿ ದಿನದ ಮಾಹಿತಿ ಸಂಗ್ರಹಿಸುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ಪ್ರಭಾರ ತಹಶೀಲ್ದಾರ್ ಬಸವರಾಜ ಎಚ್. ಚಿಗರಿ ’ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.