ADVERTISEMENT

ವರ್ಷದೊಳಗೆ ತಾಲ್ಲೂಕಿನಲ್ಲಿ ರಕ್ತನಿಧಿ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2011, 5:30 IST
Last Updated 27 ಸೆಪ್ಟೆಂಬರ್ 2011, 5:30 IST

ಮಂಡ್ಯ: ಜಿಲ್ಲೆಯಲ್ಲಿ ಪ್ರಸವ ಸಂದರ್ಭದಲ್ಲಿ ವಾರ್ಷಿಕ ತಾಯಿಯ ಮರಣ ಪ್ರಮಾಣ ಶೇ 15; ಶಿಶುವಿನ ಮರಣ ಪ್ರಮಾಣ 458; ತಾಲ್ಲೂಕು ಕೇಂದ್ರಗಳಲ್ಲಿ ಈಗಲೂ ರಕ್ತನಿಧಿ ಇಲ್ಲ; ಜಿಲ್ಲೆಯಲ್ಲಿ 131 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದು, ಮಹಿಳಾ ವೈದ್ಯರ ಕೊರತೆ ಇದೆ.

ಜನನಿ, ಮಡಿಲು, ಸಮುದಾಯ ಆರೋಗ್ಯ ಸೇರಿದಂತೆ ವಿವಿಧ ಆರೋಗ್ಯ ಯೋಜನೆಗಳ ಜಾರಿಯ ನಂತರವೂ ಜಿಲ್ಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರವು ಎದುರಿಸುತ್ತಿರುವ ಸಮಸ್ಯೆಗಳು ಇವು.
ಸಂಸದ ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಗರದಲ್ಲಿ ನಡೆದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಗಳ ಪ್ರಗತಿ ಪರಿಶೀಲನೆಯಲ್ಲಿ ಈ ವಿಷಯ ಪ್ರಮುಖವಾಗಿ ಪ್ರಸ್ತಾಪವಾಯಿತು.

ವಿವಿಧ ಯೋಜನೆಗಳನ್ನು ಜಾರಿಗೊಳಿಸಿ ಬಳಿಕ ಶಿಶು ಮತ್ತು ತಾಯಿ ಮರಣ ಪ್ರಮಾಣ ಕುಗ್ಗಿಸಲು ಒತ್ತು ನೀಡಲಾಗಿದೆ.  ತಾಯಿ ಪ್ರಮಾಣ ವಾರ್ಷಿಕ 33 ರಿಂದ 15ಕ್ಕೆ ಇಳಿದಿದ್ದರೆ, ಶಿಶು ಮರಣ ಪ್ರಮಾಣ ವಾರ್ಷಿಕ 610 ರಿಂದ 458ಕ್ಕೆ ಇಳಿದಿದೆ. ಅಂತೆಯೇ, ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಶೇ 97 ರಿಮದ 99.3ಕ್ಕೆ ಏರಿದ್ದರೆ, ಸರ್ಕಾರಿ ಸಂಸ್ಥೆಗಳಲ್ಲಿ ಹೆರಿಗೆ ಆಗುವ ಪ್ರಮಾಣ ಶೇ 55 ರಿಂದ 70ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಗುಣ ಮಟ್ಟದ ಹೆರಿಗೆ ಸೌಲಭ್ಯ ಸೇರಿದಂತೆ ಆರೋಗ್ಯ ಸೇವೆ ಒದಗಿಸಲು ದಿನದ 24 ಗಂಟೆ ಕೆಲಸ ಮಾಡುವಂತೆ 30 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇಲ್ಲಿ ಪಾಳಿ ಆಧಾರದಲ್ಲಿ ಎಲ್ಲ ಸಮಯದಲ್ಲೂ ವೈದ್ಯರು ಇರುತ್ತಾರೆ ಎಂದರು.
 
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತುರ್ತು ಪ್ರಕರಣ ದಾಖಲು ಮಾಡಿಕೊಳ್ಳದಿರಲು, ಪೂರ್ಣ ಸೌಲಭ್ಯದ ಜೊತೆಗೆ ಅಹಿತಕರ ಬೆಳವಣಿಗೆ ಸಂದರ್ಭದಲ್ಲಿ ಸಂಬಂಧಿಕರ ಆಕ್ರೋಶಕ್ಕೆ ಗುರಿ ಆಗಬೇಕಾದಿತು ಎಂಬುದು ಕಾರಣ ಎಂದು ಸಭೆಯಲ್ಲಿ ಹಲವು ವೈದ್ಯಾಧಿಕಾರಿಗಳು ಹೇಳಿದರು.

ರಕ್ತನಿಧಿ ಕೊರತೆ: ಜಿಲ್ಲಾ ಕೇಂದ್ರ ಹೊರತುಪಡಿಸಿದರೆ ತಾಲ್ಲೂಕು ಕೇಂದ್ರ ಗಳಲ್ಲಿ ರಕ್ತನಿಧಿ ಇಲ್ಲ. ಇದೂ, ತುರ್ತು ಚಿಕಿತ್ಸೆ ಒದಗಿಸಲು ಕಷ್ಟವಾಗಿದೆ. ಪ್ರಸ್ತುತ ತಾಲ್ಲೂಕುಗಳಲ್ಲಿ ರಕ್ತದ ದಾಸ್ತಾನು ವ್ಯವಸ್ಥೆ ಮಾತ್ರವೇ ಇದ್ದು, ವರ್ಷದೊಳಗೆ ಎ್ಲ್ಲಲೆಡೆ ರಕ್ತನಿಧಿ ಆರಂಭಿಸುವ ಉದ್ದೇಶವಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

ಶಾಸಕರಾದ ಎಂ. ಶ್ರೀನಿವಾಸ್, ಎ.ಬಿ.ರಮೇಶ್‌ಬಾಬು, ಜಿಪಂ ಅಧ್ಯಕ್ಷ ಶಿವಣ್ಣ, ತಾಪಂ ಅಧ್ಯಕ್ಷ ಭದ್ರಾಚಲಮೂರ್ತಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.