ADVERTISEMENT

ವರ್ಷ ಹೊಸತು; ಸಮಸ್ಯೆಗೆ ಪರಿಹಾರ ಯಾವತ್ತು?

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 10:15 IST
Last Updated 2 ಜನವರಿ 2012, 10:15 IST
ವರ್ಷ ಹೊಸತು; ಸಮಸ್ಯೆಗೆ ಪರಿಹಾರ ಯಾವತ್ತು?
ವರ್ಷ ಹೊಸತು; ಸಮಸ್ಯೆಗೆ ಪರಿಹಾರ ಯಾವತ್ತು?   

ಮಂಡ್ಯ: ವರ್ಷವೊಂದು ಉರುಳಿದೆ. ಹೊಸ ವರ್ಷ ಹೊಸತು ತರಲಿ ಎಂಬ ಹಾರೈಕೆಯೊಂದಿಗೆ, ಸಕ್ಕರೆ ಜಿಲ್ಲೆಯ ಮಂಡ್ಯದ ಕೇಂದ್ರವಾದ ನಗರದ ನಾಗರಿಕರು ಹಳೆಯ ಸಮಸ್ಯೆಗಳೊಂದಿಗೆ ಹೊಸ ವರ್ಷವನ್ನು ಪ್ರವೇಶಿಸಬೇಕಿದೆ.

ಜನಪ್ರತಿನಿಧಿಗಳು ಜನ ವಿಮುಖರಾದರೆ, ಅಭಿವೃದ್ಧಿ ಹೇಗೆ ಮಲಗಿಕೊಳ್ಳಲಿದೆ ಎಂಬುದಕ್ಕೆ ನಿದರ್ಶನವೆಂಬಂತೆ ಸಮಸ್ಯೆಗಳಿವೆ. ಕೆಲವು ಸಮಸ್ಯೆಗಳನ್ನೇ ಉದಾಹರಿಸಿದರೆ  ರಸ್ತೆ ಅವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ಕುಡಿಯುವ ನೀರು ಪೂರೈಕೆಯ ಪಂಪ್‌ಹೌಸ್‌ನಲ್ಲಿ ಶುಚಿತ್ವ, ಸಂಚಾರ ಸಮಸ್ಯೆ, ಈ ಎಲ್ಲದರ ಜೊತೆಗೆ ಶುಭಾಶಯ ವಿನಿಮಯ ಆಗಬೇಕಿದೆ.

ಪಂಪ್‌ಹೌಸ್: ನಗರಕ್ಕೆ ಕುಡಿಯುವ ನೀರು ಪೂರೈಸುವ ಪಂಪ್‌ಹೌಸ್‌ನ ನೀರು ಸಂಗ್ರಹಾಕಾರದಲ್ಲಿ ನಾಯಿ ಕೊಳೆತ ದೇಹ ಪತ್ತೆಯಾಗಿತ್ತು. `ತಕ್ಷಣ~ವೇ ಭೇಟಿ ನೀಡಿದ ಅಧಿಕಾರಿಗಳು, ನಗರಸಭೆ ಸದಸ್ಯರು ಅದನ್ನು ತೆಗೆಸುವ, ಸಂಗ್ರಹಾಕಾರವನ್ನು ಸ್ವಚ್ಛವಾಗಿ ಇಡುವ ಭರವಸೆ ನೀಡಿದ್ದರು. ಸಂಗ್ರಹಾಕಾರದ ನೀರು ಬದಲಿಸುವ ಕ್ರಮವು ಆಗಿತ್ತು.

ಹೊಸ ವರ್ಷದ ಮೊದಲ ದಿನ ಪಂಪ್‌ಹೌಸ್‌ಗೆ ಭೇಟಿ ನೀಡಿದಾಗ ಕಂಡು ಬಂದದ್ದು ಅದೇ ಕಲ್ಮಶ. ಸಂಗ್ರಹಾಕಾರದ ಬದಿಯಲ್ಲಿ ಅಲ್ಲಲ್ಲಿ ಕಲ್ಮಶ ಶೇಖರವಾಗಿತ್ತು. ಈ ನೀರು ಸಂಸ್ಕರಣೆಯಾದ ಬಳಿಕವೇ ಕುಡಿಯುವ ಉದ್ದೇಶಕ್ಕೆ ಪೂರೈಕೆ ಆಗಲಿದೆ ಎಂಬುದು ನಿಜವಾದರೂ, ಸಂಗ್ರಹಾಕಾರವನ್ನು ಸ್ವಚ್ಛವಾಗಿಡುವ ಭರವಸೆ ಮಾತ್ರ ತಳ ಸೇರಿದೆ.

ವಿವೇಕಾನಂದ ರಸ್ತೆ: ಇದು, ನಗರದ ಹೃದಯ ಭಾಗದಲ್ಲಿರುವ ಮುಖ್ಯ ಸಂಪರ್ಕ ರಸ್ತೆಯೂ ಹೌದು. `ಇಲ್ಲಿ ನಾಲ್ಕೈದು ದಿನ ಸಂಚರಿಸಿದರೆ ಅನಾರೋಗ್ಯ ಉಚಿತ~ ಎಂಬ ಘೋಷಣೆಗೆ ಹೇಳಿಮಾಡಿಸಿದಂಥ ಸ್ಥಿತಿಗೆ ರಸ್ತೆ ತಲುಪಿ ಏಳೆಂಟು ತಿಂಗಳೇ ಉರುಳಿವೆ.

ದುರಸ್ತಿ ಪಡಿಸಲು ನಗರಸಭೆ, ಜಿಲ್ಲಾಧಿಕಾರಿಗಳ ಕಚೇರಿ ಎಂದು ಸಾಕಷ್ಟು ಪ್ರತಿಭಟನೆಗಳು ಆಗಿವೆ. ನಿಯೋಗಗಳು ಭೇಟಿ ನೀಡಿವೆ. ಸಂಸದರು, ಶಾಸಕರು ಭೇಟಿ ನೀಡಿ ಫೋಟೋ ತೆಗೆಸಿಕೊಂಡಿದ್ದೂ ಆಯಿತು. ಆದರೆ, ರಸ್ತೆಯಲ್ಲಿ ಧೂಳು ಏಳುವುದು ನಿಂತಿಲ್ಲ.

ದಿನದಲ್ಲಿ ತಾತ್ಕಾಲಿಕ ದುರಸ್ತಿ ಮಾಡುತ್ತೇವೆ ಎಂದು ಒಂದೂವರೆ ತಿಂಗಳ ಹಿಂದೆ ನಗರಸಭೆ ಅಧ್ಯಕ್ಷರ ಭರವಸೆ, ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂಬ ಜಿಲ್ಲಾಡಳಿತದ ಭರವಸೆ ಹೊಸ ವರ್ಷದಲ್ಲಿಯಾದರೂ ಜಾರಿಗೆ ಬರಬಹುದು! ಹೊಳಲು ರಸ್ತೆ, ಪ್ರಮುಖ ಸಂಪರ್ಕ ರಸ್ತೆಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಅಲ್ಲ.

ನಗರದ ಇನ್ನೊಂದು ದೊಡ್ಡ ಸಮಸ್ಯೆ ತ್ಯಾಜ್ಯ ವಿಲೇವಾರಿ. ಜಿಲ್ಲಾಧಿಕಾರಿಗಳು, ಪ್ರಮುಖ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸುವ ಸಮಾರಂಭಗಳ ಬಳಿಯೂ ತ್ಯಾಜ್ಯ ವಿಲೇವಾರಿಗೆ ಒತ್ತು ನೀಡದಷ್ಟು ನಗರಸಭೆ ಇದನ್ನು ಪರಿಗಣಿಸಿದೆ.

ತ್ಯಾಜ್ಯ ವಿಲೇವಾರಿಗೆ ಲಕ್ಷಾಂತರ ವ್ಯಯವಾದರೂ ಫಲಿತಾಂಶ ನೀರಸ. ರಾಷ್ಟ್ರೀಯ ಭಾವೈಕ್ಯ ಶಿಬಿರ ನಡೆದ, ನಗರಸಭೆಯ ಮಗ್ಗುಲಲ್ಲೇ ಇರುವ ಕಲಾಮಂದಿರದ ಬಳಿಯೇ ಭಾನುವಾರ ತ್ಯಾಜ್ಯದ ರಾಶಿ ಇತ್ತು. ಶಿಬಿರಾರ್ಥಿಗಳಿಗೆ ಆಯೋಜಿಸಿದ್ದ ಉಪಾಹಾರದ ನಂತರದ ತ್ಯಾಜ್ಯ ರಸ್ತೆಗೇ ಎಸೆಯಲಾಗಿತ್ತು.

ಈ ಮೂಲಕ ವಿವಿಧ ಜಿಲ್ಲೆಗಳು, ರಾಜ್ಯಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು, ಅಧಿಕಾರಿಗಳಿಗೆ ನಗರಸಭೆಯ ಕಾರ್ಯವೈಖರಿಯ ದರ್ಶನವು ಆಯಿತು. ಈ ಎಲ್ಲದರ ಜೊತೆಗೆ ನ್ಯೂ ಇಯರ್ ಬಂದಿದೆ. ಸಮಸ್ಯೆಗಳ ದೃಷ್ಟಿಯಿಂದ ನಾಗರಿಕರಿಗೆ ಹ್ಯಾಪಿಯನ್ನು ತರುತ್ತದಾ ಎಂದು ಕಾದುನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.