ಶ್ರೀರಂಗಪಟ್ಟಣ: ತಾಲ್ಲೂಕಿನ ಗೆಂಡೆಹೊಸಹಳ್ಳಿ ಬಳಿಯ ವಿಲ್ಸನ್ ಡಿಸ್ಟಿಲರಿ ಕಾರ್ಮಿಕರು ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ 16ನೇ ದಿನಕ್ಕೆ ಕಾಲಿಟ್ಟಿದೆ.
ತಾಲ್ಲೂಕಿನ ಅರಕೆರೆ ನಾಡ ಕಚೇರಿ ಬಳಿ ಮೇ 23ರಿಂದ 47 ಮಂದಿ ಕಾರ್ಮಿಕರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. 14 ತಿಂಗಳ ವೇತನ, ಭವಿಷ್ಯ ನಿಧಿ, ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಿಐಟಿಯು ಕಾರ್ಮಿಕ ಸಂಟನೆಯ ನೇತೃತ್ವದಲ್ಲಿ ಅವರು ಧರಣಿ ನಡೆಸುತ್ತಿದ್ದಾರೆ. ಕ್ಷೇತ್ರದ ಶಾಸಕ ರಮೇಶ ಬಂಡಿಸಿದ್ದೇಗೌಡ ಕೂಡ ಕಾರ್ಮಿಕರ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದಾರೆ. ಆದರೂ ನಮ್ಮ ಬೇಡಿಕೆಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ವಿಲ್ಸನ್ ಡಿಸ್ಟಿಲರಿ ಕಾರ್ಮಿಕರ ಸಂಘದ ಕಾರ್ಯದರ್ಶಿ ದಿನೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸ್ಟಿಲರಿಯ ಚರ ಆಸ್ತಿಯನ್ನು ಹರಾಜು ಹಾಕಿ ಕಾರ್ಮಿಕರ ವೇತನ, ಭವಿಷ್ಯದ ನಿಧಿ ಭರಿಸುವಂತೆ ಜಿಲ್ಲಾ ಕಾರ್ಮಿಕ ನ್ಯಾಯಾಲಯ ಜಿಲ್ಲಾಡಳಿತಕ್ಕೆ ಮೂರು ತಿಂಗಳ ಹಿಂದೆಯೇ ಆದೇಶ ನೀಡಿದೆ. ಈ ಆದೇಶದ ಅನ್ವಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದಾರೆ. ಆದರೆ ತಹಶೀಲ್ದಾರ್ ನ್ಯಾಯಾಲಯದ ಆದೇಶ ಉಲ್ಲಂಘಿಸುವ ಮೂಲಕ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು. ಜೂ.9ರ ಒಳಗೆ ಕಾರ್ಮಿಕರ ಬೇಡಿಕೆ ಈಡೇರದಿದ್ದರೆ ಕುಟುಂಬ ಸದಸ್ಯರ ಜತೆಗೂಡಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಸಿಐಟಿಯು ಸಂಘಟನೆಯ ಸಿ. ಕುಮಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.