ADVERTISEMENT

ವಿವಾದಾತ್ಮಕ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 6:56 IST
Last Updated 9 ಏಪ್ರಿಲ್ 2013, 6:56 IST
ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೊಮವಾರ ಶ್ರೀರಂಗಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೊಮವಾರ ಶ್ರೀರಂಗಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.   

ಶ್ರೀರಂಗಪಟ್ಟಣ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಬೆಳಗಾವಿ ವಿಚಾರದಲ್ಲಿ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ಪಟ್ಟಣದಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಇಲ್ಲಿನ ಕುವೆಂಪು ವೃತ್ತದ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಸರ್ಕಾರ ಹಾಗೂ ಉಪ ಮುಖ್ಯಮಂತ್ರಿ ಆರ್.ಆರ್.ಪಾಟೀಲ್ ವಿರುದ್ಧ ಘೋಷಣೆ ಕೂಗಿದರು. ಹೆದ್ದಾರಿ ಸಂಚಾರ ತಡೆದ ಪರಿಣಾಮ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ ಸಭೆಯಲ್ಲಿ ಆರ್.ಆರ್.ಪಾಟೀಲ್ ಕರ್ನಾಟಕ ವಿರೋಧಿ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಿಂದ 5 ಮಂದಿ ಎಂಇಎಸ್ ಶಾಸಕರನ್ನು ಆಯ್ಕೆ ಮಾಡಿದರೆ ಕರ್ನಾಟಕಕ್ಕೆ ಪಾಠ ಕಲಿಸುವುದಾಗಿ ಉದ್ದಟತನದ ಮಾತನಾಡಿದ್ದಾರೆ. ಕೊಯ್ನಾದಿಂದ ನೀರು ಬಿಡುವ ವಿಚಾರದಲ್ಲಿ ತಮ್ಮ ಘನತೆಗೆ ಸಲ್ಲದ ಹೇಳಿಕೆ ನೀಡುವ ಮೂಲಕ ಎರಡೂ ರಾಜ್ಯಗಳ ನಡುವಿನ ಸಾಮರಸ್ಯ ಕದಡುವ ಹುನ್ನಾರ ನಡೆಸಿದ್ದಾರೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಸ್ವಾಮಿಗೌಡ  ಆಕ್ರೋಶ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿಗಳು ಆರ್.ಆರ್.ಪಾಟೀಲ್ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ತಾಲ್ಲೂಕು ಅಧ್ಯಕ್ಷ ಕೆ.ಬಿ.ಸಬವರಾಜು ಆಗ್ರಹಿಸಿದರು.
ಗಂಜಾಂ ಯೋಗಣ್ಣ, ಪಾನಿಪೂರಿ ರವಿ, ನರಸಿಂಹ, ಬಾಲಸುಬ್ರಹ್ಮಣ್ಯ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ, ರಾಮಚಂದ್ರು ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.