ADVERTISEMENT

ವೈದ್ಯನಾಥಪುರ; ನನಸಾಗದ ಸೂರಿನ ಕನಸು

ಮಧುಸೂದನ ಮದ್ದೂರು
Published 15 ಆಗಸ್ಟ್ 2017, 7:40 IST
Last Updated 15 ಆಗಸ್ಟ್ 2017, 7:40 IST
ಮದ್ದೂರು– ವೈದ್ಯನಾಥಪುರಕ್ಕೆ ಸಂಪರ್ಕಿಸುವ ರಸ್ತೆ ಬದಿಯಲ್ಲಿನ ಗುಡಿಸಲುಗಳು
ಮದ್ದೂರು– ವೈದ್ಯನಾಥಪುರಕ್ಕೆ ಸಂಪರ್ಕಿಸುವ ರಸ್ತೆ ಬದಿಯಲ್ಲಿನ ಗುಡಿಸಲುಗಳು   

ಮದ್ದೂರು: ರಾಷ್ಟ್ರದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮದ ಕಾಣುತ್ತಿದೆ. ಆದರೆ, ಇಂದಿಗೂ ರಸ್ತೆಯಂಚಿನ ಗುಡಿಸಲಲ್ಲಿ ಜೀವ ಭಯದೊಂದಿಗೆ ಬದುಕು ಸಾಗಿಸುತ್ತಿರುವ ನಿವಾಸಿಗಳು ಮಾತ್ರ ಸ್ವಂತ ಸೂರಿನ ಕನಸು ಯಾವಾಗ ನನಸಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಮದ್ದೂರು ಸಮೀಪದ ವೈದ್ಯನಾಥಪುರ ಸಂಪರ್ಕಿಸುವ ರಸ್ತೆಯ ಎಡಬದಿಯಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಗುಡಿಸಲು ಕಟ್ಟಿಕೊಂಡು ವಾಸವಾಗಿರುವ 10 ಬಡ ಕುಟುಂಬಗಳ ಸ್ವಂತ ಸೂರು ಹೊಂದುವ ಕನಸು ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆಯುತ್ತ ಬಂದರೂ ನನಸಾಗಿಲ್ಲ.

ಪ್ರಸಿದ್ಧ ಪ್ರವಾಸಿ ಕ್ಷೇತ್ರ ವೈದ್ಯನಾಥಪುರಕ್ಕೆ ನೂರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಪ್ರತಿನಿತ್ಯ ನೂರಾರು ವಾಹನಗಳು ಈ ರಸ್ತೆಯ ಮೂಲಕವೇ ಸಾಗುತ್ತವೆ. ಆರು ತಿಂಗಳ ಹಿಂದೆ ಬ್ರೇಕ್ ವೈಫಲ್ಯಗೊಂಡ ಕಾರೊಂದು ಇಲ್ಲಿನ ಗುಡಿಸಲೊಂದಕ್ಕೆ ನುಗ್ಗಿತು. ಆ ಗುಡಿಸಲಿನ ನಿವಾಸಿಗಳು ಕೂಲಿಗೆ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ. ಅಂದಿನಿಂದ ಇಂದಿನವರೆಗೆ ಗುಡಿಸಲ ನಿವಾಸಿಗಳು ಜೀವ ಭಯದಲ್ಲಿಯೇ ದಿನ ದೂಡುತ್ತಿದ್ದಾರೆ.

ADVERTISEMENT

ನಗರಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ವೈದ್ಯನಾಥಪುರ ಗಡಿಯ ಈ ಗುಡಿಸಲುವಾಸಿಗಳ ಹೆಸರು ಮತದಾರರ ಪಟ್ಟಿಯಲ್ಲಿದೆ. ಅವರಿಗೆ ಮತದಾರರ ಗುರುತಿನ ಚೀಟಿಯೂ ಇದೆ. ಬಿಪಿಎಲ್ ಪಡಿತರ ಚೀಟಿಯೂ ಇದೆ. ಎಲ್ಲ ನಿವಾಸಿಗಳೂ ಆಧಾರ್ ಗುರುತಿನ ಚೀಟಿಯನ್ನು ಮಾಡಿಸಿದ್ದಾರೆ. ಆದರೆ ಅವರಿಗೆ ನಿವೇಶನಗಳ ಹಕ್ಕುಪತ್ರ ಇಂದಿಗೂ ಸಿಕ್ಕಿಲ್ಲ.

ರಸ್ತೆ ಬದಿಯಲ್ಲಿ ಇವರ ನಿವೇಶನಗಳಿರುವುದರಿಂದ ಅವರಿಗೆ ಹಕ್ಕು ಪತ್ರ ನೀಡಲು ಬರುವುದಿಲ್ಲ ಎಂಬುದು ಅಧಿಕಾರಿಗಳ ವಾದ. ಇನ್ನೊಂದೆಡೆ ಸುರಕ್ಷಿತವಾಗಿರುವ ಸ್ಥಳದಲ್ಲಿ ನಿವೇಶನ ನೀಡಿ, ಸ್ವಂತ ಸೂರು ಹೊಂದುವ ಕನಸನ್ನು ನನಸಾಗಿಸುವ ಇಚ್ಛಾಶಕ್ತಿ ಇಲ್ಲಿನ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಇಲ್ಲ ಎಂಬುದು ನಿವಾಸಿಗಳ ಅಳಲು.

ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕವೂ ಇಲ್ಲ. ರಾತ್ರಿಯಾದರೆ ವಿಷಜಂತುಗಳ ಹಾವಳಿ. ಸೀಮೆಎಣ್ಣೆ ಬುಡ್ಡಿ ಬೆಳಕಿನಲ್ಲಿಯೇ ಇಲ್ಲಿನ ಜನ ರಾತ್ರಿ ಕಳೆಯಬೇಕು. ಮಳೆ ಬಂದಾಗ ಅವರ ಪಾಡು ಅಷ್ಟಿಷ್ಟಲ್ಲ. ಏರು ರಸ್ತೆಯಿಂದ ಇವರ ಗುಡಿಸಲುಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ.

‘ಮಳೆ ಬಂದರೆ ರಾತ್ರಿ ಇಡೀ ಗುಡಿಸಲಿಗೆ ನುಗ್ಗಿದ ನೀರನ್ನು ಹೊರ ಹಾಕುವುದೇ ಕೆಲಸ’ ಎನ್ನುತ್ತಾರೆ ಇಲ್ಲಿನ ನಿವಾಸಿ ಕೃಷ್ಣ. ಗುಡಿಸಲು ಬಳಿಯೇ ಒಂದು ಕೊಳವೆಬಾವಿ, ಕೈಪಂಪಿದೆ. ಅಲ್ಲಿಂದ ನೀರು ತಂದು ಸ್ನಾನ, ಶೌಚಕ್ಕೆ ಬಳಸಬೇಕಿದೆ. ಈ ಗುಡಿಸಲಿನಲ್ಲಿ ವಾಸವಾಗಿರುವ ಒಂದಷ್ಟು ಮಕ್ಕಳು ಸಮೀಪದ ವೈದ್ಯನಾಥಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಓದಲು ಹೋಗುತ್ತಾರೆ. ಐದನೇ ತರಗತಿಯವರೆಗೆ ಮಾತ್ರ ಓದು. ಬಳಿಕ ಕೂಲಿ ಕೆಲಸವೇ.

‘ನಮ್ಮ ತಂದೆ ಅಣ್ಣಾಮಲೈ 50ವರ್ಷಗಳ ಹಿಂದೆ ತಮಿಳುನಾಡಿನ ಗ್ರಾಮವೊಂದರಿಂದ ಇಲ್ಲಿಗೆ ಕೂಲಿ ಅರಸಿ ಬಂದಿದ್ದರು. ಬಳಿಕ ಇಲ್ಲಿಯೇ ಗುಡಿಸಲು ಕಟ್ಟಿ ನೆಲೆಯಾದರು. ಅವರ ಜತೆ ಹತ್ತಾರು ಬಡ ಕುಟುಂಬಗಳು ಕೂಲಿಯರಸಿ ತಮಿಳುನಾಡಿನಿಂದ ಇಲ್ಲಿಗೆ ಬಂದು ನೆಲೆಯಾದವು. ಅಂದಿನಿಂದ ಇಲ್ಲಿಯವರೆಗೆ ಇಲ್ಲಿಯೇ ಇದ್ದೇವೆ.

ಚುನಾವಣೆಗಳಲ್ಲಿ ಓಟು ಹಾಕುತ್ತಿದ್ದೇವೆ. ಎಲ್ಲ ರಾಜಕಾರಣಿಗಳು, ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿಗೆ ಹಲವು ಬಾರಿ ಬಂದು ಹೋಗಿದ್ದಾರೆ. ಆದರೆ ಇದುವರೆಗೂ ನಮಗೆ ಈ ಜಾಗದ ಹಕ್ಕು ಪತ್ರವನ್ನಾಗಲಿ, ಬೇರೆ ಕಡೆ ಮನೆಯನ್ನಾಗಲಿ ಕಟ್ಟಿಕೊಟ್ಟಿಲ್ಲ’ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಮು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.