ಕೃಷ್ಣರಾಜಪೇಟೆ: ಶಾಲಾ ವಿದ್ಯಾರ್ಥಿಗಳನ್ನು ಅಪರಿಚಿತರು ಅಪಹರಿಸಲು ಯತ್ನಿಸಿ, ನಂತರ ಬಿಡುಗಡೆಗೊಳಿಸಿರುವ ಘಟನೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಸಂಜಯ್ ಸೂರ್ಯವಂಶಿ (14) ಮತ್ತು ಮಹೇಂದ್ರ (15) ಎಂಬ ವಿದ್ಯಾರ್ಥಿಗಳೇ ಅಪಹರಣಕ್ಕೆ ಒಳಗಾಗಿದ್ದವರು. ಸಮೀಪದ ವಡ್ಡರಗುಡಿ ಗ್ರಾಮದವರಾದ ಈ ಇಬ್ಬರು ಬಾಲಕರು ಗುರುವಾರ ಬೆಳಿಗ್ಗೆ ಶಾಲೆಗೆ ನಡೆದುಕೊಂಡು ಬರುವಾಗ ಟಾಟಾ ಸುಮೋ ವಾಹನದಲ್ಲಿ ಎದುರಿಗೆ ಬಂದ ಅಪರಿಚಿತರು ಇಬ್ಬರನ್ನೂ ಬಲವಂತವಾಗಿ ವಾಹನದಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಇವರಿಬ್ಬರ ಜತೆಗಿದ್ದ ಮತ್ತೊಬ್ಬ ಶಾಲಾ ಬಾಲಕ ಅಪಹರಣದ ವಿಷಯವನ್ನು ಸಹಪಾಠಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ತಿಳಿಸಿದ್ದಾನೆ.
ಶಾಲಾ ಮುಖ್ಯಶಿಕ್ಷಕರ ದೂರಿನ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ವಿದ್ಯಾರ್ಥಿಗಳ ಪತ್ತೆಗೆ ಮುಂದಾದರು. ಹುಡುಕಾಟ ಸಂದರ್ಭದಲ್ಲಿ ಸಮೀಪದ ಆಲಂಬಾಡಿ ಬಳಿ ನಿಂತಿದ್ದ ಅಪಹರಣಕ್ಕೆ ಒಳಗಾಗಿದ್ದ ಮಕ್ಕಳು ಸಿಕ್ಕಿದ್ದಾರೆ.
ಪೊಲೀಸರು ಮಕ್ಕಳನ್ನು ವಿಚಾರಿಸಿದಾಗ `ಟಾಟಾಸುಮೋದಲ್ಲಿ ಬಂದ ಸ್ವಾಮೀಜಿಯ ವೇಷದಲ್ಲಿದ್ದ ವ್ಯಕ್ತಿಯೊಂದಿಗೆ ನಾಲ್ವರು ಅಪರಿಚಿತ ದಾಂಡಿಗರು ನಮ್ಮನ್ನು ಅಪಹರಿಸಿದರು. ಗಲಾಟೆ ಮಾಡಿದರೆ ಕೊಂದು ಹಾಕುವುದಾಗಿ ಚಾಕು ತೋರಿಸಿ ಬೆದರಿಸಿದರು. ಮುಂದೆ ಸಾಗಿದ ನಂತರ ಇದ್ದಕ್ಕಿದ್ದಂತೆ ನಿರ್ಜನ ಪ್ರದೇಶದಲ್ಲಿ ಇಳಿಸಿ ಹೊರಟು ಹೋದರು~ ಎಂದು ಮಕ್ಕಳು ತಿಳಿಸಿದ್ದಾರೆ.
ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್‌ಕುಮಾರ್, ಸಬ್‌ಇನ್ಸ್‌ಪೆಕ್ಟರ್ ರೇಣುಕಾಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಬಿ.ಪುಟ್ಟಸ್ವಾಮಿಗೌಡ ಇತರರು ಅಪಹರಣಕ್ಕೆ ಒಳಗಾಗಿದ್ದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಘಟನೆಯ ಬಗ್ಗೆ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.