ADVERTISEMENT

ಶಾಸಕರ ಮೇಲೆ ಹಲ್ಲೆ: ವಿವಿಧೆಡೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2011, 5:50 IST
Last Updated 22 ಸೆಪ್ಟೆಂಬರ್ 2011, 5:50 IST

ನಾಗಮಂಗಲ: ತಾಲ್ಲೂಕಿನ ಬಿದರಕೆರೆ ಗ್ರಾಮದಲ್ಲಿ ಅದೇ ಗ್ರಾಮದ ಯುವಕ ಸಂತೋಷ್ ಎಂಬಾತನಿಂದ ಶಾಸಕ ಕೆ.ಸುರೇಶ್‌ಗೌಡ ಹಲ್ಲೆಗೆ ಒಳಗಾಗಿರುವ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಹರಿಜನ ಕಾಲೋನಿಯಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮ ಹಾಗೂ ಪಿತೃಪಕ್ಷ ಹಬ್ಬವಿತ್ತು. ರಾತ್ರಿ 11ರ ಸುಮಾರಿಗೆ ಶಾಸಕರು ಕಾರ್ಯಕ್ರಮ ಮುಗಿಸಿಕೊಂಡು ವಾಪಸು ಕಾರು ಹತ್ತುವಾಗ ಯುವಕರ ಗೊಂಪೊಂದು ಕಾರ್ಯಕ್ರಮದ ಪ್ರಾಯೋಜಕತ್ವ ಕುರಿತು ಶಾಸಕರ ಜೊತೆ ಮಾತುಕತೆಯಲ್ಲಿ ತೊಡಗಿತ್ತು. ಇದೇ ವೇಳೆ ಇನ್ನೊಂದು ಗುಂಪಿನ ಮಧ್ಯದಿಂದ ಕೆಲವು ದುಷ್ಕರ್ಮಿಗಳು ಕಲ್ಲು  ಎಸೆದಿದ್ದಾರೆ.

ಮೊದಲನೆ ಕಲ್ಲು ಆಟೋ ಒಂದರ ಗಾಜನ್ನು ಪುಡಿ ಮಾಡಿದೆ. ಎರಡನೇ ಕಲ್ಲು ಶಾಸಕರ ತಲೆಯ ಬಲ ಭಾಗಕ್ಕೆ ಬಿದ್ದು ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಬಿ.ಜಿ. ನಗರದ ಎ.ಸಿ.ಗಿರಿ ಆಸ್ಪತ್ರೆಗೆ ದಾಖಲು ಮಾಡಿ ತಲೆಗೆ 5 ಹೊಲಿಗೆ ಹಾಕಿ, ಪ್ರಥಮ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು.

ಸಂತೋಷ್ ಎಂಬಾತ ಕಲ್ಲು ಹಾಗೂ ಮೊಟ್ಟೆ ಹಿಡಿದು ಶಾಸಕರೆಡೆಗೆ ಎಸೆಯುವ ವೇಳೆ ಗ್ರಾಮಸ್ಥರು ಸ್ಥಳದಲ್ಲಿಯೇ ಆತನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ. ಹರೀಶ್ ಹಾಗೂ ನಟರಾಜ್ ಎಂಬುವರ್ನು ಬುಧವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೋಲೀಸ್  ಮೂಲಗಳು ತಿಳಿಸಿವೆ. ಇದೇ ವೇಳೆ ಶಾಸಕರ ಅಂಗರಕ್ಷಕ ಹಾಗೂ ರೋಜಾ ಎಂಬ ಬಾಲಕಿ ತಲೆಗೂ ಗಾಯಗಳಾಗಿವೆ.

ರಸ್ತೆ ತಡೆ: ಶಾಸಕ ಕೆ.ಸುರೇಶ್‌ಗೌಡರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ತಾಲ್ಲೂಕಿನಾದ್ಯಂತ ವಿವಿಧೆಡೆ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಪಟ್ಟಣದ ಟಿ.ಬಿ. ಬಡಾವಣೆಯ ಬಿಜಿಎಸ್ ವೃತ್ತದಿಂದ ಮೆರವಣಿಗೆ ಹೊರಟು ಪಟ್ಟಣದ ಟಿ.ಮರಿಯಪ್ಪ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಮಂಡ್ಯ ಜಿಲ್ಲಾ ಡಿವೈಎಸ್ಪಿ ಚನ್ನಬಸವಣ್ಣ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಈ ಕೃತ್ಯಕ್ಕೆ ಯಾರೇ ಕುಮ್ಮಕ್ಕು ನೀಡಿದ್ದರೂ ಅವರನ್ನು ಬಂಧಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಶಿರಸ್ತೇದಾರ್ ರಾಮಪ್ಪನವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಬಿ.ಸಿ.ಮೋಹನ್‌ಕುಮಾರ್, ಮುಳುಕಟ್ಟೆ ಶಿವರಾಮಯ್ಯ, ಬಸವೇಗೌಡ, ಹನುಮಂತು, ನಾಗೇಶ್, ಕೆಂಪೇಗೌಡ, ಗ್ರಾ.ಪಂ. ಸದಸ್ಯ ನಾಗರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ತಾಲ್ಲೂಕಿನ ಕದಬಹಳ್ಳಿ, ಬೆಳ್ಳೂರು ಕ್ರಾಸ್‌ಗಳಲ್ಲೂ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಬಿಂಡಿಗನವಿಲೆ ಹೋಬಳಿಯಲ್ಲಿ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್‌ಗೆ ಕರೆ: ಶುಕ್ರವಾರದ ಒಳಗೆ ಶಾಸಕರ ಮೇಲೆ ಹಲ್ಲೆ ನಡೆಸಿದವರಿಗೆ ಸೂಕ್ತ ಶಿಕ್ಷೆ ನೀಡದಿದ್ದರೆ ಶುಕ್ರವಾರ ತಾಲ್ಲೂಕು ಬಂದ್ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯರಾದ ಹುಚ್ಚೇಗೌಡ, ಚಂದ್ರೇಗೌಡ, ಮಣ್ಣಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗುರುಮೂರ್ತಿ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.