ADVERTISEMENT

ಶಿಥಿಲಾವಸ್ಥೆಯಲ್ಲಿ ಶಾಲೆ: ಮಕ್ಕಳಿಗೆ ಆತಂಕ

ಕುಸಿದು ಬೀಳುವ ಸ್ಥಿತಿಯಲ್ಲಿರುವ ಹೆಂಚುಗಳು, ಭಯದಲ್ಲಿ ಪೋಷಕರು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 10:28 IST
Last Updated 7 ಡಿಸೆಂಬರ್ 2017, 10:28 IST

ಮಂಡ್ಯ: ತಾಲ್ಲೂಕಿನ ಚಿಕ್ಕಮಂಡ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಕಟ್ಟಡಗಳು ಶಿಥಿಲಾವಸ್ಥೆಯಿಂದ ಕೂಡಿದ್ದು, ಹೆಂಚುಗಳು ಕಳಚಿ ಬೀಳುವ ಸ್ಥಿತಿಯಲ್ಲಿವೆ. ಮಕ್ಕಳು ಭಯದಿಂದ ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

ಶಾಲೆಗೆ ಚಿನ್ನಗಿರಿದೊಡ್ಡಿ, ದೇವೇಗೌಡನದೊಡ್ಡಿ, ಚಿಕ್ಕಮಂಡ್ಯ, ಬಿ.ಡಿ.ಕಾಲೊನಿ ಸೇರಿ ವಿವಿಧ ಗ್ರಾಮಗಳಿಂದ ಮಕ್ಕಳು ಬರುತ್ತಾರೆ. ಇದರಲ್ಲಿ ‘ಮಕ್ಕಳಮನೆ’ಸೇರಿ 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಂಕ್ರೀಟ್‌ ಕಟ್ಟಡವಿದ್ದರೂ ಸೀಲಿಂಗ್‌ ಕಳಚಿ ಬೀಳುತ್ತಿದೆ.

ಹೆಂಚುಗಳ ಮರದ ಪಟ್ಟಿಗಳು ಗೆದ್ದಲು ಹುಳು ತಿಂದು ಹಾಳಾಗಿವೆ. ಅತೀ ಹೆಚ್ಚು ಅಪಾಯದ ಮುನ್ಸೂಚನೆ ಇರುವ ಕೊಠಡಿಯನ್ನು ಖಾಲಿ ಮಾಡಲಾಗಿದೆ.

ADVERTISEMENT

ಶಿಕ್ಷಣ ಇಲಾಖೆ ಶೀಘ್ರ ಶಾಲಾ ಕಟ್ಟಡ ದುರಸ್ತಿ ಮಾಡಿಸಿಕೊಡಬೇಕು. ಹಳೆಯ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿ ನರ್ಮಾಣ ಮಾಡಿಕೊಡಬೇಕು. ಶಾಲೆಗೆ ಅಗತ್ಯ ಮೂಲ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೋಷಕರು ಆಗ್ರಹಪಡಿಸಿದರು.

‘ಈ ಶಾಲೆ 1951ರಲ್ಲಿ ಶಾಲೆ ಆರಂಭವಾಗಿದೆ. ಆಗಿನಿಂದಲೂ ಕಟ್ಟಡ ದುರಸ್ತಿಯಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅಡುಗೆ ಮಾಡುವ ಕೋಣೆಯನ್ನು ದುರಸ್ತಿಗೊಳಿಸದೇ ಹಾಗೆ ಬಿಡಲಾಗಿದೆ. ಅದನ್ನು ಸರಿಪಡಿಸಿ ವಿದ್ಯಾರ್ಥಿಗಳ ನೆರವಿಗೆ ಬರಬೇಕು’ ಎಂದು ಮುಖ್ಯ ಶಿಕ್ಷಕ ಬಿ.ವಿ.ಶ್ರೀನಿವಾಸಮೂರ್ತಿ ಮನವಿ ಮಾಡುತ್ತಾರೆ.

‘ಶಾಲಾ ಕಟ್ಟಡಗಳ ಸಮಸ್ಯೆಯ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ಯಾರೊಬ್ಬರೂ ಶಾಲೆಯ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ಮಕ್ಕಳು ಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಇದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಲಿಂಗರಾಜು ಬೇಸರ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳು ಶಾಲಾ ಮಕ್ಕಳ ನೆರವಿಗೆ ಬರಬೇಕು. ಅಲ್ಲಿರುವ ಆತಂಕ ದೂರವಾಗಬೇಕು’ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸಿ.ಆರ್‌.ಪುಟ್ಟಸ್ವಾಮಿ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.