ಮಂಡ್ಯ: ಬೋಧನಾ ಹಾಗೂ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಪಿಇಎಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಿದರು.
ಕಾಲೇಜಿನ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಸಾವಿರಾರು ವಿದ್ಯಾರ್ಥಿಗಳು ಬೋಧನಾ ಶುಲ್ಕ ಹೆಚ್ಚಳದ ಅಧಿಸೂಚನೆಯನ್ನು ಆಡಳಿತ ಮಂಡಳಿಯು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಪರೀಕ್ಷಾ ಶುಲ್ಕವನ್ನು ಸರ್ಕಾರ ಮತ್ತೆ ಹೆಚ್ಚಳ ಮಾಡಿದ್ದು, ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ ಉಂಟು ಮಾಡುತ್ತಿದೆ. ಆದ್ದರಿಂದ ಶುಲ್ಕ ಹೆಚ್ಚಳದ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ದಾಖಲಾತಿ ಸಮಯದಲ್ಲಿ 11 ಸಾವಿರ ರೂಪಾಯಿ ಶುಲ್ಕ ಪಾವತಿಸಿದ್ದರೂ ಕಾಲೇಜು ಆಡಳಿತ ಮಂಡಳಿ ಈಗ ಬಿ.ಎ., ಬಿ.ಕಾಂ. ವಿದ್ಯಾರ್ಥಿಗಳು ₨ 1,720, ಬಿ.ಎಸ್ಸಿ ವಿದ್ಯಾರ್ಥಿಗಳು ₨ 2,190 ಮತ್ತು ಬಿ.ಬಿ.ಎಂ. ವಿದ್ಯಾರ್ಥಿಗಳು ₨ 1,800 ಹೆಚ್ಚುವರಿ ಪಾವತಿಸಿಬೇಕು ಎಂದು ಸೂಚಿಸಿದೆ. ವಿಶ್ವವಿದ್ಯಾಲಯ ಮತ್ತು ಸರ್ಕಾರದ ಆದೇಶ ಇರದಿದ್ದರೂ ಹೆಚ್ಚಿನ ಶುಲ್ಕ ಕೇಳುತ್ತಿರುವುದನ್ನು ಖಂಡಿಸಿದರು.
ಕಳೆದ ವರ್ಷ ಪರೀಕ್ಷಾ ಶುಲ್ಕ ಹೆಚ್ಚಳ ಮಾಡಿದ್ದ ಸರ್ಕಾರ ಈ ವರ್ಷ ಮತ್ತೆ ಶುಲ್ಕ ಹೆಚ್ಚಳ ಮಾಡಿದೆ. ಇದನ್ನು ಪ್ರಶ್ನಿಸಿದರೆ, ನಿಮ್ಮ ಬ್ಯಾಂಕ್ ಖಾತೆಗೆ ಹಣ ಮರು ಪಾವತಿಯಾಗುತ್ತದೆ ಎಂದು ಸಬೂಬು ಹೇಳುತ್ತಿದ್ದಾರೆ, 2012ರಲ್ಲಿ ನಾವು ಕಟ್ಟಿದ್ದ ಪರೀಕ್ಷಾ ಶುಲ್ಕ ಮರು ಪಾವತಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಣವನ್ನು ಸರ್ಕಾರ ವ್ಯಾಪಾರೀಕರಣ ಮಾಡುತ್ತಿದೆ. ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಕಾನೂನು ಮೀರಿ ಶುಲ್ಕ ಸಂಗ್ರಹಿಸುತ್ತಿರುವುದನ್ನು ಸರ್ಕಾರ ತಡೆಯಬೇಕು ಎಂದು ವಿದ್ಯಾರ್ಥಿ ಮುಖಂಡ ಮುತ್ತುರಾಜ್ ಆಗ್ರಹಿಸಿದರು.
ಶಿಕ್ಷಣ ಸಂಸ್ಥೆ ಅಧ್ಯಕ್ಷರೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳ ಪರವಾಗಿ ಕ್ರಮ ಕೈಗೊಳ್ಳುವುದಾಗಿ ಕಾಲೇಜಿನ ಪ್ರಾಂಶುಪಾಲರು ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌್. ಶಂಕರಪ್ಪ ಅವರಿಗೆ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಸಂಘಟನೆಯ ರವಿ ಮೋಹನ್, ಕಾಲೇಜು ವಿದ್ಯಾರ್ಥಿಗಳಾದ ಪ್ರಸನ್ನ, ಮಹೇಶ್, ತೌಶಿಕ್, ಹೇಮಂತ್, ದೇವರಾಜ್, ದಿವ್ಯಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.