ADVERTISEMENT

`ಶ್ರೀರಂಗಪಟ್ಟಣಕ್ಕೆ ಅಂಬರೀಷ್ ಬಂದರೆ ಬಂಡಾಯ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 11:11 IST
Last Updated 16 ಏಪ್ರಿಲ್ 2013, 11:11 IST

ಶ್ರೀರಂಗಪಟ್ಟಣ: ಕೆಪಿಸಿಸಿ ಉಪಾಧ್ಯಕ್ಷ, ನಟ ಅಂಬರೀಷ್ ಶ್ರೀರಂಗಪಟ್ಟಣ ಕೇತ್ರದಿಂದ ಕಾಂಗ್ರೆಸ್ ಬಿ ಫಾರಂ ಪಡೆದು ಸ್ಪರ್ಧೆಗೆ ಇಳಿದರೆ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಬಂಡಾಯ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿಯುವುದು ಖಚಿತ ಎಂದು ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಾದ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಮರೀಗೌಡ ಹೇಳಿದರು.

ರವೀಂದ್ರ ಶ್ರೀಕಂಠಯ್ಯ ಅವರಿಗೆ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡುವ ಘೋಷಣೆ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿ ಸಂಭ್ರಮ ಆಚರಿಸುತ್ತಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿದರು. ಅಂಬರೀಷ್ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರವೀಂದ್ರ ಶ್ರೀಕಂಠಯ್ಯ ಅವರ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ.

ಸ್ಥಳೀಯವಾಗಿ ಯಾವತ್ತೂ ಪಕ್ಷ ಸಂಘಟನೆ ಮಾಡದ ಅಂಬರೀಷ್ ಚುನಾವಣೆ ಸಮಯದಲ್ಲಿ ಬಂದು ಲಾಭ ಪಡೆಯುವ ಹುನ್ನಾರ ನಡೆಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದರಿಂದ ಸಹಜವಾಗಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಂಬರೀಷ್ ಬಗ್ಗೆ ಅಸಮಾಧಾನ ಇದೆ. ಕಾಂಗ್ರೆಸ್ ವರಿಷ್ಠರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದರೂ ಇತರ ಕ್ಷೇತ್ರಗಳ ವಿಷಯದಲ್ಲಿ ಅಂಬರೀಷ್ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂದರು.

ಇಲ್ಲಿನ ಬೆಂಗಳೂರು- ಮೈಸೂರು ಹೆದ್ದಾರಿ ವೃತ್ತದಲ್ಲಿ ರವೀಂದ್ರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ  ಸಂಭ್ರಮಿಸಿದರು.
ಕಾಂಗ್ರೆಸ್‌ನ ಪರಿಶಿಷ್ಟ ಜಾತಿ/ ವರ್ಗಗಳ ವಿಭಾಗದ ಮಾಜಿ ಜಿಲ್ಲಾಧ್ಯಕ್ಷ ಅರಕೆರೆ ಗುರು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವಪುರ ಪುಟ್ಟಸ್ವಾಮಿ, ಪುರಸಭೆ ಸದಸ್ಯ ಎಸ್.ಟಿ.ರಾಜು ಎ.ಪಿ.ನಾಗೇಶ್, ಮಹೇಶ್ ಇತರರು ಹಾಜರಿದ್ದರು.

ಅಂಬರೀಷ್ ಮುನಿಸು: ಚರ್ಚೆಗೆ ಗ್ರಾಸ
ಮಂಡ್ಯ: ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಪಕ್ಷೇತರರಾಗಿ ಅಶೋಕ್‌ಕುಮಾರ್ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.
ಅಂಬರೀಷ್ ಮುನಿಸು: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ನೀಡಿದ್ದರಿಂದ ಮುನಿಸಿಕೊಂಡಿರುವ ಅಂಬರೀಷ್ ಅವರು ಸೋಮವಾರ ನಿಗದಿಯಾಗಿದ್ದಂತೆ ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಆಗಮಿಸಲಿಲ್ಲ.

ಮಂಡ್ಯದಿಂದ ಅಂಬರೀಷ್ ಸ್ಪರ್ಧಿಸಲಿದ್ದಾರೆಯೇ? ಜೆಡಿಎಸ್‌ಗೆ ಹೋಗಲಿದ್ದಾರೆಯೇ ಎಂಬ ವಿಷಯ ಸಾರ್ವಜನಿಕರಲ್ಲಿ ವ್ಯಾಪಕ ಚರ್ಚೆಗೆ ಒಳಗಾಯಿತು. ಅಂಬರೀಷ್ ಏನು ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಕುತೂಹಲ ಮನೆ ಮಾಡಿತ್ತು.

ಅಂಬರೀಷ್ ಅವರೊಂದಿಗೆ ಪಕ್ಷದ ಮುಖಂಡರು ಚರ್ಚೆ ನಡೆಸಿದ್ದಾರೆ. ಸಮಸ್ಯೆಗೆ ಪರಿಹಾರ ಸಿಗಲಿದೆ. ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ವಿಶ್ವಾಸವನ್ನು ಅವರ ಬೆಂಬಲಿಗರು ವ್ಯಕ್ತಪಡಿಸುತ್ತಾರೆ.

ಅಂಬರೀಷ್ ವಿರುದ್ಧ ವಾಗ್ದಾಳಿ
ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕೆಪಿಸಿಸಿ ಸದಸ್ಯ ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ನೀಡಿರುವುದಕ್ಕೆ ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅಪಸ್ವರ ಎತ್ತುವ ಮೂಲಕ ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಎನ್.ಮಂಜುನಾಥ್ ಟೀಕಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, `ಅಭ್ಯರ್ಥಿಯ ಆಯ್ಕೆಯನ್ನು ವಿರೋಧಿಸುವ ಮೂಲಕ ಪಕ್ಷದ ಹೈಕಮಾಂಡ್ ನಿರ್ಧಾರವನ್ನೇ ಅಂಬರೀಷ್ ಪ್ರಶ್ನಿಸಿದ್ದಾರೆ' ಎಂದು ಟೀಕಿಸಿದರು.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನವನ್ನು ಗೆಲ್ಲುವ ಅವಕಾಶ ಪಕ್ಷಕ್ಕಿದೆ. ಆದರೆ, ಅಂಬರೀಷ್ ಅವರ ವರ್ತನೆಯು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಪಂ ಸದಸ್ಯೆ ವಸಂತ ಪ್ರಕಾಶ್, ರಾಮೇಗೌಡ, ಲವಕುಮಾರ್, ರಾಮಕೃಷ್ಣೇಗೌಡ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.