ADVERTISEMENT

ಸಂಪನ್ಮೂಲ, ಯುವಶಕ್ತಿ ಸದ್ಬಳಕೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 10:16 IST
Last Updated 11 ಸೆಪ್ಟೆಂಬರ್ 2013, 10:16 IST

ಮಳವಳ್ಳಿ: ದೇಶದ ಅಭಿವೃದ್ಧಿಗೆ ಇರುವ ಸಂಪನ್ಮೂಲ ಸದ್ಬಳಕೆ ಮತ್ತು ಯುವಶಕ್ತಿ ಉಪಯೋಗವಾಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಾಲಾನಂದನಾಥ  ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಮಾರ್ ಸಮುದಾಯಭವನದಲ್ಲಿ ಮಂಗಳವಾರ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದೇಶದಲ್ಲಿ ಸಂಪೂರ್ಣ ಸಂಪನ್ಮೂಲ ಬಳಕೆಯಾಗುತ್ತಿಲ್ಲ. ಇದು ನಾವು ದೇಶಕ್ಕೆ ಮಾಡುತ್ತಿರುವ ದ್ರೋಹ. ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಲು ಮುಂದಾಗಬೇಕು ಹಾಗೂ ಆರ್ಥಿಕ ಸದೃಢರಾದಗಲೇ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ಗ್ರಾಮಗಳು ಉದ್ದಾರವಾಗಬೇಕು. ಇದಕ್ಕೆ ಪೂರಕವಾಗಿ ಅನ್ನ ನೀಡುವ ರೈತರು ದುಡಿಯುವಂತಾಗಬೇಕು. ಗ್ರಾಮಗಳನ್ನು ಬಿಟ್ಟು ಪಟ್ಟಣದತ್ತ ಹೋಗುವುದನ್ನು ತಪ್ಪಿಸಿ ಅಸಮತೋಲನ ಕಾಪಾಡುವ ಕೆಲಸವು ಆಗಬೇಕಿದೆ. ದೇಶವನ್ನು ಸಂಸ್ಕೃತಿಗೆ ಮಾತ್ರ ಹೊಗಳಿದರೆ ಸಾಲದು ಆರ್ಥಿಕ ವ್ಯವಸ್ಥೆಯಲ್ಲಿ ಸದೃಢರಾಗಬೇಕು ಎಂದು ಕರೆ ನೀಡಿದರು.

ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪಟ್ಟಣದಲ್ಲಿ ಪ್ರಾರಂಭವಾಗುತ್ತಿರುವ ಕೆಂಪೇಗೌಡ ಪತ್ತಿನ ಸಹಕಾರ ಸಂಘ ಆರ್ಥಿಕವಾಗಿ ಅಭಿವೃದ್ಧಿ ಹೊಂದಿ ಇತರೆ ಸಂಘಗಳಿಗೂ ಮಾದರಿಯಾಗಲಿ ಎಂದು ಶುಭಹಾರೈಸಿದರು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇತಿಹಾಸ ತಜ್ಞ ತಲಕಾಡು ಚಿಕ್ಕರಂಗೇಗೌಡ,  ಸಹಕಾರ ಇಲಾಖೆ ನಿವೃತ್ತ ಅಧಿಕಾರಿ ಕೆ.ಎಸ್.ಗುರುಪ್ರಸಾದ್, ಮುಡಾ ಅಧೀಕ್ಷಕ ಎಂಜಿನಿಯರ್ ಮಹೇಶ್, ಡಿವೈಎಸ್ಪಿ ಜಿ.ಕೆ. ಚಿಕ್ಕಣ್ಣ ಅವರನ್ನು ಸನ್ಮಾನಿಸಲಾಯಿತು.

ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಭಾವಚಿತ್ರ ಅನಾವರಣ ಮಾಡಿದರು. ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಂ. ಶ್ರೀನಿವಾಸ್, ಸಹಕಾರ ಸಂಘಗಳ ಜಂಟಿ ನಿರ್ದೇಶಕ ಡಾ.ಎಚ್.ಆರ್. ಕೃಷ್ಣಯ್ಯಗೌಡ, ಸಹಕಾರ ಅಭಿವೃದ್ಧಿ ಅಧಿಕಾರಿ ರಂಗಸ್ವಾಮಿ, ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದೇಗೌಡ ಹಾಗೂ ಸಂಘದ ನಿರ್ದೇಶಕರು, ಮುಖಂಡರು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.